ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ರೈತ ಜಮೀನು ಹದಗೊಳಿಸುತ್ತಿರುವುದು.
- ಎಲ್ಲೆಡೆ ಭೂಮಿ ಹದಗೊಳಿಸುವ ಕಾರ್ಯ ಜೋರು
- ಮೆಕ್ಕೆಜೋಳ ಬೆಳೆ ಕ್ಷೇತ್ರ ವಿಸ್ತರಣೆ ಸಾಧ್ಯತೆ
ಅಳವಂಡಿ: ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿವೆ.
ಎಲ್ಲೆಡೆ ರಂಟೆ-ಕುಂಟೆ ಹೊಡೆದು ಬಿತ್ತನೆಗೆ ಭೂಮಿ ಸಿದ್ಧಗೊಳಿಸುವ ಕಾರ್ಯ ಜೋರಾಗಿ ನಡೆದಿದೆ. ವಲಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಯೋಗ್ಯವಾಗ ಕೆಂಪು ಭೂಮಿ ಹಾಗೂ ಹಿಂಗಾರು ಹಂಗಾಮಿಗೆ ಎರೆಭೂಮಿ ಸಾಕಷ್ಟಿದೆ.
ಮುಂಗಾರಿನಲ್ಲಿ ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ, ಸಜ್ಜೆ, ಎಳ್ಳು, ತೊಗರಿ, ಶೇಂಗಾ ಮುಂತಾದ ಬೆಳೆ ಬೆಳೆಯುವ ವಾಡಿಕೆ ಇದೆ. ಮೈನಳ್ಳಿ, ಬಿಸರಳ್ಳಿ, ಬೆಳಗಟ್ಟಿ, ಹಟ್ಟಿ, ಹೈದರನಗರ, ಕೇಸಲಾಪುರ, ಹಲವಾಗಲಿ, ನಿಲೋಗಿಪುರ, ಮುರ್ಲಾಪುರ, ಘಟ್ಟಿರಡ್ಡಿಹಾಳ, ಬೋಚನಹಳ್ಳಿ ಮುಂತಾದ ಗ್ರಾಮಗಳು ಮಸಾರಿ (ಕೆಂಪು) ಭೂಮಿ ಹೊಂದಿದ್ದು, ಮುಂಗಾರು ಬಿತ್ತನೆಗೆ ಸಿದ್ಧಗೊಳ್ಳುತ್ತಿವೆ.
ಅಳವಂಡಿ ವಲಯದಲ್ಲಿ ಒಟ್ಟು ಭೌಗೋಳಿಕ ಕ್ಷೇತ್ರ 121577.5 ಎಕರೆ ಇದೆ. ಇದರಲ್ಲಿ ಮುಂಗಾರು ಹಂಗಾಮಿನ ಬೆಳೆ ಕ್ಷೇತ್ರ 50303.17ಎಕರೆ, ಹಿಂಗಾರಿನ ಬೆಳೆ ಕ್ಷೇತ್ರ 46889.39ಎಕರೆ ಇದೆ.
ಇತ್ತೀಚಿನ ಕೆಲ ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ರೈತರು ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಹಿಂಗಾರು ಬಿತ್ತನೆ ಕ್ಷೇತ್ರವಾದ ಎರೆಭೂಮಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತುತ್ತಿರುವುದರಿಂದ ಮುಂಗಾರು ಬಿತ್ತನೆ ಕ್ಷೇತ್ರ ವಿಸ್ತರಣೆಯಾಗಿದೆ.
ರೈತರು ಜಮೀನನ್ನು ಮುಂಗಾರು ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಮಳೆ ಉತ್ತಮವಾಗಿ ಆದರೆ ಮೆಕ್ಕೆಜೋಳ ಬಿತ್ತನೆ ಕ್ಷೇತ್ರ ಜಾಸ್ತಿಯಾಗಲಿದೆ. ರೈತರು ಜಮೀನು ಪೂರ್ತಿ ಹಸಿಯಾಗುವವರೆಗೂ ಬಿತ್ತನೆ ಮಾಡಬಾರದು. ಬಿತ್ತನೆಗೆ ಬೇಕಾದ ಬೀಜಗಳನ್ನು ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ.
— ಪ್ರತಾಪಗೌಡ ನಂದನಗೌಡ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಅಳವಂಡಿ
"
ಮುಂಗಾರು ಬಿತ್ತನೆಗೆ ಜಮೀನು ಹದಗೊಳಿಸುವ ಕಾರ್ಯ ಚುರುಕುಗೊಂಡಿದೆ. ರಂಟೆ-ಕುಂಟೆ ಹೊಡೆಯುವುದರಿಂದ ಭೂಮಿ ಹಸಿಯಾಗಿ ಬಿತ್ತನೆಗೆ ಅನೂಕೂಲ ಆಗಲಿದೆ.
— ಸುರೇಶ ಬಾವಿಹಳ್ಳಿ, ರೈತ ಅಳವಂಡಿ