ಬೆಂಗಳೂರು: ರಾಜ್ಯದಲ್ಲಿನ್ನು ಮಾಸ್ಟರ್‌ಪ್ಲ್ಯಾನ್ ವ್ಯಾಪ್ತಿಯಲ್ಲಿರುವ ಭೂಮಿಗೆ ಭೂಪರಿವರ್ತನೆ (Land conversion ) ಮಾಡಿಸುವ ಅಗತ್ಯವಿಲ್ಲ. ಬದಲಿಗೆ ನೇರ ಯೋಜನೆ ಅನುಮೋದನೆಗೆ (ಪ್ಲ್ಯಾನ್ ಅಪ್ರೂವಲ್) ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು! ಮಾಸ್ಟರ್‌ಪ್ಲ್ಯಾನ್ ವ್ಯಾಪ್ತಿಯಿಂದ ಹೊರಗಿರುವ ಭೂ ಪರಿವರ್ತನೆಗೆ 30 ದಿನಗಳ ಸಮಯ ನಿಗದಿ ಮಾಡಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಡಿಸಿಗಳಿಗೆ ಸೂಚನೆ: ಕಂದಾಯ ಸಚಿವ ಕೃಷ್ಣಬೈರೇಗೌಡ ಬುಧವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿ.23ರಂದು ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಭೂಪರಿವರ್ತನೆಯನ್ನು ಸರಳೀಕೃತ ಮಾಡಿ ಅಭಿವೃದ್ಧಿ ಪಥದತ್ತ ಸಾಗಲು ಉತ್ತೇಜನ ನೀಡಲಾಗುತ್ತಿದೆ. ಬಂಡವಾಳ ಹೂಡಿಕೆದಾರರು ಖರೀದಿಸುವ ಭೂಮಿಯನ್ನು ಸುಲಭವಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಇದಾಗಿದೆ. ಅನುಷ್ಠಾನ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಚಿವರು ಡಿಸಿಗಳಿಗೆ ಸೂಚಿಸಿದರು.
ಆನ್‌ಲೈನ್ ಅರ್ಜಿ: ಕಾಯ್ದೆ ತಿದ್ದುಪಡಿ ಪ್ರಕಾರ ಭೂ ಪರಿವರ್ತನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ಮಾಸ್ಟರ್‌ಪ್ಲ್ಯಾನ್ ಒಳಗಿರುವ ಭೂಮಿಯ ಸ್ವಭಾವದ ಆಧಾರದ ಮೇಲೆ ಭೂಮಾಲೀಕರು ನೇರ ಯೋಜನೆ ಅನುಮೋದನೆಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಇದೇ ಸಮಯದಲ್ಲಿ ಭೂಪರಿವರ್ತನೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಇನ್ನು ಸಣ್ಣ ಕೈಗಾರಿಕೆಗಳು ಅಂದರೆ 2 ಎಕರೆವರೆಗೆ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಅಗತ್ಯ ಇಲ್ಲ. ಎರಡು ಎಕರೆ ಮೀರಿದರೆ ಅಂತಹ ಜಮೀನು ಭೂ ಪರಿವರ್ತನೆ ಕಡ್ಡಾಯವಾಗಿ ಆಗಬೇಕಿದೆ. ಇದಲ್ಲದೆ, ದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಾಗಿದೆ. ಹೀಗಾಗಿ ಇದಕ್ಕೆ ಭೂಪರಿವರ್ತನೆ ಷರತ್ತು ವಿನಾಯಿತಿ ನೀಡಲಾಗಿದೆ. ಇಂಧನ ಇಲಾಖೆಯ ಅನುಮತಿ ಪಡೆದಿದ್ದರೆ, ನವೀಕರಿಸಬಹುದಾದ ಇಂಧನ ಯೋಜನಾ ಘಟಕವನ್ನು ನಿರ್ಮಾಣ ಮಾಡಲು ಭೂಪರಿವರ್ತನೆ ಅಗತ್ಯ ಇರುವುದಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಡಿಸಿಗೂ 30 ದಿನ ಅವಕಾಶ
ಮಾಸ್ಟರ್‌ಪ್ಲ್ಯಾನ್ ಹೊರಗಿನ ಮತ್ತು ಪರಿಭಾವಿತ ಭೂ ಪರಿವರ್ತನೆಗೆ (ಡೀಮ್ಡ್ ಕನ್ವರ್ಷನ್) ಈ ಹಿಂದೆ 3-4 ತಿಂಗಳು ಸಮಯ ಬೇಕಾಗಿತ್ತು. ಇದೀಗ 30 ದಿನಗಳಲ್ಲಿ ಭೂಪರಿವರ್ತನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು 30 ದಿನಗಳ ಒಳಗಾಗಿ ಸಂಬಂಧಿತ ಇಲಾಖೆ ಜತೆಗೆ ಚರ್ಚಿಸಿ ಪರಿವರ್ತನೆ ಮಾಡಬಹುದು ಅಥವಾ ತಿರಸ್ಕರಿಸಬಹುದು. ನಿಗದಿತ ದಿನಗಳ ಒಳಗಾಗಿ ಯಾವುದೇನಿರ್ಧಾರ ತೆಗೆದುಕೊಳ್ಳದೆ ಇದ್ದರೆ ಆನ್‌ಲೈನ್‌ನಲ್ಲಿ ಸ್ವಯಂಚಾಲಿತವಾಗಿ ಭೂಪರಿವರ್ತನೆ ಆಗಿ ಅರ್ಜಿದಾರನಿಗೆ ಪ್ರಮಾಣ ಪತ್ರ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.
ಕಂದಾಯ ಕೋರ್ಟ್ ಆನ್‌ಲೈನ್
ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕೆಂಬ ಯಾವುದೇ ಸ್ಪಷ್ಟ ನಿಯಮ ಇರಲಿಲ್ಲ. ಪರಿಣಾಮ ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳು ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶ ಹೊರಡಿಸಿರುವ ಉದಾಹರಣೆ ಸಾಕಷ್ಟಿವೆ. ಇದನ್ನು ತಪ್ಪಿಸುವ ಮತ್ತು ಪಾರದರ್ಶಕತೆ ತರುವ ಸಲುವಾಗಿ ಆರ್‌ಸಿಸಿಎಂಎಸ್ ಸೇರಿದಂತೆ ಡಿಜಿಟಲ್ ಆದೇಶಗಳನ್ನು ನೀಡಲಾಗುವುದು. ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್ ಮುಖಾಂತರ ನಡೆಸಲು ಕಾನೂನು ತಿದ್ದುಪಡಿ ತರಲಾಗಿದೆ. ವಾದಿ ಮತ್ತು ಪ್ರತಿವಾದಿ ಕಚೇರಿಗಳಿಗೆ ಸುತ್ತುವ ಬದಲಿಗೆ ಆನ್‌ಲೈನ್ ಮುಖಾಂತರವೇ ಕೋರ್ಟ್ ಕಲಾಪಗಳಿಗೆ ಭಾಗವಹಿಸುವ ಸುಲಭ ಮಾರ್ಗ ನೀಡಲಾಗಿದೆ.
44 ನಿಯಮಕ್ಕೆ ತಿದ್ದುಪಡಿ
2 ವರ್ಷದಲ್ಲಿ ಭೂ ಕಂದಾಯ ಕಾಯ್ದೆ 1964ರ ವಿವಿಧ ಕಲಂಗಳಿಗೆ ತಿದ್ದುಪಡಿ ತಂದು ಜನಸ್ನೇಹಿ ಆಡಳಿತಕ್ಕೆ ನಾಂದಿ ಹಾಡಲು ಪ್ರಯತ್ನಿಸಲಾಗಿದ್ದು, 47 ಕಲಂಗಳಿಗೆ 9 ತಿದ್ದುಪಡಿ ತರಲಾಗಿದೆ. 56 ವರ್ಷಗಳ ತರುವಾಯ 44 ನಿಯಮಗಳಿಗೆ ತಿದ್ದುಪಡಿ ತಂದಿದ್ದು, 1974ರ ದೇವರಾಜು ಅರಸು ಭೂಸುಧಾರಣಾ ಕಾಯ್ದೆ 1961ಕ್ಕೆ 145 ಕಡೆ ತಿದ್ದುಪಡಿ ತಂದುಕಾನೂನಿಗೆ ಸ್ವಾತಂತ್ರ್ಯ ನೀಡಲಾಗಿತ್ತು. ಅದಾದ ಬಳಿಕ ಸಮಗ್ರ ತಿದ್ದುಪಡಿ ತಂದಿರುವುದು ಇದೇ ಮೊದಲು. ಈ ತಿದ್ದುಪಡಿ ಕಂದಾಯ ನ್ಯಾಯಾಲಯಗಳನ್ನು ಪಾರದರ್ಶಕವಾಗಿ, ನಿಯಮಬದ್ಧವಾಗಿ ನಡೆಸಲು ಮತ್ತು ಜನರಿಗೆ ಸರಳ- ಸುಲಲಿತ ನ್ಯಾಯದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ, ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಡಳಿತ ಯಂತ್ರವನ್ನು ಮತ್ತಷ್ಚು ಸರಳಗೊಳಿಸುವ ಹಾಗೂ ಭೂಪರಿವರ್ತನೆ ಹೆಸರಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ತರಲಾಗಿದೆ. ಡಿ.23ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಕಂದಾಯ ಇಲಾಖೆ ಮತ್ತಷ್ಟು ಜನಸ್ನೇಹಿ ಆಗುವತ್ತ ದಾಪುಗಾಲು ಇಡುತ್ತಿದೆ.
ರಾಜ್ಯದಲ್ಲಿ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಬಿಎಂಆರ್‌ಡಿಎ ಮಾಡಲಾಗಿದೆ. ಅದೇ ರೀತಿ ಮೈಸೂರಿಗೆ ಮುಡಾ ಸೇರಿದಂತೆ ರಾಜ್ಯದಲ್ಲಿ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳೇ ಮಾಸ್ಟರ್‌ಪ್ಲ್ಯಾನ್ ಸಿದ್ಧಪಡಿಸಲಿವೆ. ಸಾಮಾನ್ಯವಾಗಿ ಮುಂದಿನ 15 ವರ್ಷಗಳಲ್ಲಿ ಏನೆಲ್ಲ ಅಭಿವೃದ್ಧಿ ಯೋಜನೆ ಬರಲಿವೆ ಎಂಬುದು ಈ ಪ್ಲ್ಯಾನ್‌ನಲ್ಲಿ ಉಲ್ಲೇಖವಾಗಿರುತ್ತದೆ.