ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನ
- * ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಸ್ಪಂದನೆ
- * ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಂದ ಬಾರಿ ಮೆಚ್ಚುಗೆ ವ್ಯಕ್ತ
- * ಮೂರು ದಿನಗಳಲ್ಲಿ 72,740 ಅಧಿಕ ಮಂದಿ ಭೇಟಿ
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಈ ಬಾರಿ ಆಯೋಜನೆಗೊಂಡಿರುವ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತಾದ ‘ತೇಜಸ್ವಿ ವಿಸ್ಮಯ’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಸ್ಪಂದನೆ ಜತೆಗೆ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರದರ್ಶನದಲ್ಲಿ ಹೂಗಳಲ್ಲಿ ಅರಳಿರುವ ಬೆಟ್ಟದ ತಪ್ಪಿನಲ್ಲಿರುವ ತೇಜಸ್ವಿಯವರ ‘ನಿರುತ್ತರ’ ಮನೆ, ದಟ್ಟವಾದ ಕಾಡು, ತೇಜಸ್ವಿಯವರ ಕಾರ್ಟೂನ್ ಕಲಾಕೃತಿಗಳ, ವ್ಯಂಗ್ಯಚಿತ್ರಗಳು, ಛಾಯಾಚಿತ್ರಗಳನ್ನು ಬಹಳ ಕುತುಹಲದಿಂದ ವೀಕ್ಷಿಸುವುದರ ಜತೆಗೆ ಸೆಲ್ಫೀ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ.
ಪ್ರತಿ ಬಾರಿಯಂತೆ ಪುಷ್ಪಪ್ರದರ್ಶನದ ಜತೆಗೆ ಇದೇ ಮೊದಲ ಬಾರಿಗೆ ನಾಟಕಗಳ ಪ್ರದರ್ಶನ ಮತ್ತು ತೇಜಸ್ವಿಯವರ ಕುರಿತು ಸಾಹಿತ್ಯ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನಾಟಕಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಗಾಜಿನ ಮನೆಯ ಒಳಗೂ, ಹೊರಗೂ ತೇಜಸ್ವಿಯವರ ಕ್ಯಾರಿಕೇಚರ್‌ಗಳು ಗಮನ ಸೆಳೆಯುತ್ತಿವೆ ಒಂದೆಡೆ ತೇಜಸ್ವಿಯವರು ಕ್ಯಾಮರಾ ಹಿಡಿದು ನಿಂತಿರುವುದು, ಮೀನಿಗೆ ಗಾಳ ಹಾಕುತ್ತಿರುವುದು, ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವುದು, ನಾಯಿಯೊಂದಿಗೆ ತೇಜಸ್ವಿಯವರು ಹೀಗೆ ಹತ್ತು ಹಲವು ಚಿತ್ರಗಳು ಗಮನ ಸೆಳೆಯುತ್ತಿವೆ.
ಫಲಪುಷ್ಪ ಪ್ರದರ್ಶನಕ್ಕೆ ಪಡೆದ ಟಿಕೆಟ್‌ನಲ್ಲೇ ನಾಟಕ ಹಾಗೂ ಇತರೆ ಸಂವಾದ ಕಾರ್ಯಕ್ರಮಗಳಲ್ಲೂ ಭಾಗವಹಿಸಬಹುದು. ಪ್ರತ್ಯೇಕ ಟಿಕೆಟ್ ಇಲ್ಲ. ಹೀಗಾಗಿ ಶುಕ್ರವಾರ ಸಂಜೆ ನಡೆದ ‘ನನ್ನ ತೇಜಸ್ವಿ’ ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಿ, ಚುಮು ಚುಮು ಚಳಿಯ ನಡುವೆ ಹುಲ್ಲುಹಾಸಿನ ಮೇಲೆ ಕುಳಿತು ನಾಟಕ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಫಲಪುಷ್ಪ ಪ್ರದರ್ಶನಕ್ಕೆ ಕಳೆದ ಮೂರು ದಿನಗಳಲ್ಲಿ 72,740 ಅಧಿಕ ಮಂದಿ ಆಗಮಿಸಿದ್ದು, 28.34 ಲಕ್ಷ ರೂ. ಅಧಿಕ ಹಣ ಸಂಗ್ರಹವಾಗಿದೆ. ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿದ್ದಾರೆ.