ಬೆಂಗಳೂರು: ಗದಗ ಜಿಲ್ಲೆಯ ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ ಮನೆಯ ಅಡಿಪಾಯ ತೋಡುವಾಗ ನಿಧಿ ಸಿಕ್ಕ ಬಳಿಕ ಉತ್ಖನನದ ಕಾರ್ಯ ಆರಂಭವಾಗಿದ್ದು, ಅದರ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ್(77) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ. ಕೇಶವ್ ಅವರ ನೇತೃತ್ವದಲ್ಲಿ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೊಗೇರಿ, ಡಾ ಟಿ.ಎಂ ಕೇಶವ್ ಮತ್ತು ಶೈಜೇಶ್ವರ ಹೆಸರಲ್ಲಿ ಉತ್ಖನನ ಪರವಾನಿಗೆ ಪಡೆಯಲಾಗಿತ್ತು.
ಕೇಂದ್ರ ಪುರಾತತ್ವ ಇಲಾಖೆ ಅಧಿಕ್ಷಕರಾಗಿ ನಿವೃತ್ತರಾಗಿದ್ದ ಡಾ.ಟಿ.ಎಂ ಕೇಶವ್.
ಅವರ ಅಗಲುವಿಕೆ ದೊಡ್ಡ ನೋವು ತಂದಿದೆ. ನಾಳೆ ಉತ್ಖನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಐತಿಹಾಸಿಕ ಸ್ಥಳ, ಶಿಲ್ಪಕಲೆಗಳ ತೊಟ್ಟಿಲು ಎಂದೇ ಹೆಸರಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೊಸ ತಿರುವು ಹಾಗೂ ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಜ.30ರಂದು ಶೋಧ ಕಾರ್ಯದ ವೇಳೆ ಹಾವು ಪ್ರತ್ಯಕ್ಷವಾಗಿದೆ. ಗುರುವಾರ (ಜ.29) 12ನೇ ದಿನದ ಉತ್ಖನನದ ವೇಳೆ ಕಲ್ಲಿನ ಮುಕುಟ ಮಣಿ ಶಿಲೆ ಹಾಗೂ ಅಪರೂಪದ ತ್ರಿಮುಖಿ ನಾಗ ಶಿಲೆ, ಮಡಿಕೆ ತುಣಕು ಪತ್ತೆಯಾಗಿದ್ದು, ಲಕ್ಕುಂಡಿಯ ಐತಿಹಾಸಿಕ ಶ್ರೀಮಂತಿಕೆಯನ್ನು ಪುನರುಚ್ಚರಿಸಿದೆ.