ಲಕ್ಕುಂಡಿಯಲ್ಲಿ ಮತ್ತೊಂದು ಪುರಾತನ ಅವಶೇಷ ಪತ್ತೆ 
ರಾಜ್ಯ

ಲಕ್ಕುಂಡಿ ನಿಧಿ ರಹಸ್ಯ: 2ನೇ ದಿನದ ಉತ್ಖನನದ ವೇಳೆ ಪುರಾತನ ಅವಶೇಷ ಪತ್ತೆ! ಕುತೂಹಲ ಕೆರಳಿಸಿದ ಆಕೃತಿ

ಪ್ರಮುಖ ಮುಖ್ಯಾಂಶಗಳು

  • ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
  • ಮನೆ ಕಟ್ಟಿಸಲು ಅಡಿಪಾಯ ತೋಡುವಾಗ ತಂಬಿಗೆ ಪ್ರತ್ಯಕ್ಷ
  • 2ನೇ ದಿನದ ಉತ್ಖನನದ ವೇಳೆ ಪುರಾತನ ಅವಶೇಷ ಪತ್ತೆ
  • ಅಧಿಕಾರಿಗಳು, ಸ್ಥಳೀಯರ ಕುತೂಹಲ ಕೆರಳಿಸಿದ ಆಕೃತಿ
ಗದಗ: ಜ.10ರಂದು ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಅಡಿಪಾಯ ತೋಡುವಾಗ ತಂಬಿಗೆಯೊಂದು ಪತ್ತೆಯಾಗಿದ್ದು, ಅದರಲ್ಲಿ ಮುತ್ತು, ಹವಳ, ಚಿನ್ನಾಭರಣ, ಖಡ್ಗ, ನೀಲಮಣಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಸಿಕ್ಕಿತು. ನಿಧಿ ಸಿಕ್ಕ ಸ್ಥಳವನ್ನು ಜಿಲ್ಲಾಡಳಿತಕ್ಕೆ ಕುಟುಂಬ ತೋರಿಸಿದ್ದೇ ತಡ, ಅಂದಿನಿಂದ ಇಂದಿನವರೆಗೆ ಆ ಜಾಗದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.

ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ ಕಾರ್ಯಾಚರಣೆ

ನಿಧಿ ಪತ್ತೆಯಾದ ಬಳಿಕ ಹೈಅಲರ್ಟ್ ಆಗಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು, ಇನ್ನೂ ಪುರಾತನ ಕಾಲದ ವಸ್ತುಗಳು ಸಿಗಬಹುದು ಎಂಬ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಇಂದು ಲಕ್ಕುಂಡಿಯಲ್ಲಿ 2ನೇ ದಿನದ ಉತ್ಖನನದ ವೇಳೆ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಾಚೀನ ಕಾಲದ ಅವಶೇಷವೊಂದು ಪತ್ತೆಯಾಗಿದೆ.
ಭೂಮಿಯಲ್ಲಿ ಒಂದೂವರೆ ಅಡಿ ಅಗೆಯುತ್ತಿದ್ದಂತೆ ಪ್ರಾಚ್ಯಾವಶೇಷ ಪತ್ತೆಯಾಗಿದೆ. ಇದು ಅಧಿಕಾರಿಗಳು ಹಾಗೂ ಸ್ಥಳೀಯರ ಕುತೂಹಲವನ್ನು ಇನ್ನಷ್ಟು ದುಪ್ಪಟ್ಟಾಗಿಸಿದೆ. 2ನೇ ದಿನದ ಉತ್ಖನನ ಆರಂಭದಲ್ಲೇ ಪ್ರಾಚೀನ ಅವಶೇಷ ಮಾದರಿ ಸಿಕ್ಕಿದೆ. ಸ್ಥಳದಲ್ಲಿ ಕುತೂಹಲ ಮೂಡಿಸಿರುವ ಈ ಆಕೃತಿ ಯಾವ ಕಾಲದ್ದು? ಯಾವ ಶಿಲಾಕೃತಿ ಎಂಬುದ್ದನ್ನು ಪುರಾತತ್ವ ಇಲಾಖೆ ತಜ್ಞರು ಸ್ಪಷ್ಟ ಪಡಿಸಬೇಕಿದೆ.

ಆರಂಭದಲ್ಲಿ ಸಿಕ್ಕಿದ್ದೇನು?

ಮನೆಯ ಅಡಿಪಾಯ ತೋಡಿದ ಬಡ ಕುಟುಂಬಕ್ಕೆ ಸಿಕ್ಕ ತಂಬಿಗೆಯಲ್ಲಿ ಚಿನ್ನಾಭರಣ, ಹವಳ ಸೇರಿ ಹಲವು ಬೆಲೆ ಬಾಳುವ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿ ಗ್ರಾಮದ ಶ್ರೀಮಂತಿಕೆ ಮತ್ತೊಮ್ಮೆ ಪುನರುಚ್ಚರಿಸಿದೆ. ಜ.10ರಂದು ಪತ್ತೆಯಾದ ಚಿನ್ನಾಭರಣದಲ್ಲಿ ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳ ಜತೆ ಒಂದು ಮುತ್ತು ದೊರೆತಿದ್ದು, ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿದೆ. ಇದು ಪ್ರಾಚೀನ ಕಾಲದ್ದು ಎಂಬುದಂತು ಸ್ಪಷ್ಟವಾಗಿದೆ.

ಪತ್ತೆ ಆಗಿದ್ಹೇಗೆ?

ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಶನಿವಾರ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಎಂದು ಸೂಚಿಸುವ ಚಿನ್ನಾಭರಣಗಳು ಸಿಕ್ಕಿತು. ಅಲ್ಲಿಂದ ಶುರುವಾದ ಪುರಾತತ್ವ ಇಲಾಖೆಯ ಕೆಲಸ, ಇದು ಯಾವ ಶತಮಾನದ್ದು? ಇನ್ನೂ ಏನೆಲ್ಲ ಸಿಗಬಹುದು? ಎಂದು ಕಂಡುಹಿಡಿಯುವ ಸವಾಲಿಗಿಳಿದಿದೆ.