Lakes are the lifeblood of villages
ಮಾಗಡಿ : ಕೆರೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದು ನಮ್ಮೆಲ್ಲರ ಹೊಣೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಜಯಕರ ಶೆಟ್ಟಿ ಹೇಳಿದರು.
ಮಲ್ಲಿಕುಂಟೆ ಸರ್ಕಾರಿ ಕೆರೆ ಪುನಶ್ಚೇತನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ಕೆರೆ ಇಡೀ ಗ್ರಾಮದ ಜೀವನಾಡಿಯಾಗಿ ಕೆರೆಯಿಂದ ಎತ್ತಿದ ಹೂಳನ್ನು ರೈತರು ತಮ್ಮ ಜಮೀನುಗಳಿಗೆ ಬಳಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ, ಉತ್ತಮ ಬೆಳೆ ಹಾಗೂ ಹೆಚ್ಚಿನ ಆದಾಯ ಪಡೆಯಬಹುದು. ಕೆರೆಯ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿ, ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಲಿದೆ. ಜತೆಗೆ ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಲಿದೆ ಎಂದರು.
ಎಸ್‌ಕೆಡಿಆರ್‌ಡಿಪಿ ಮೂಲಕ ಈವರೆಗೆ ರಾಜ್ಯಾದ್ಯಂತ ಸುಮಾರು 1 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಕೆರೆಗಳನ್ನು ಉಳಿಸಲು ಗ್ರಾಮಸ್ಥರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು. ರೈತರು ಹೂಳು ಕೊಂಡೊಯ್ಯುವಾಗ ಯಾವುದೇ ಗೊಂದಲ ಅಥವಾ ಸಮಸ್ಯೆ ಆಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಕೆರೆ ಸಮಿತಿಯ ಅಧ್ಯಕ್ಷ ಮಾಗಡಯ್ಯ, ಉಪಾಧ್ಯಕ್ಷ ಬಸವರಾಜು, ಕೋಶಾಧಿಕಾರಿ ಹನುಮಂತಯ್ಯ, ಸದಸ್ಯರಾದ ಚಿದಾನಂದ, ರಾಜು, ಲೋಕೇಶ್, ಮುಖಂಡರಾದ ರಮೇಶ್, ರಂಗರಾಜು, ತಿಮ್ಮೇಗೌಡ, ಹನುಮಂತರಾಯಪ್ಪ, ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಸೇವಾಪ್ರತಿನಿಧಿಗಳಾದ ಭಾಗ್ಯಲಕ್ಷ್ಮೀ, ಪ್ರೇಮಾ ಇದ್ದರು.