Lake revival is a social work
ಗೌರಿಬಿದನೂರು: ತಾಲೂಕಿನ ಕೆರೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಗೌರಿಬಿದನೂರು ಸೇವಾ ಪ್ರತಿಷ್ಠಾನದಹಿರಿಯ ಅಧಿಕಾರಿ ವರಪ್ರಸಾದ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಒಳ್ಳೆಯ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಪೋತೇನಹಳ್ಳಿ ರಾಮಣ್ಣ ತಿಳಿಸಿದರು.
ಗೌರಿಬಿದನೂರು ಸೇವಾ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ 15ನೇ ಕೆರೆ ಪುನರುಜ್ಜೀವನ ಕಾರ್ಯಕ್ರಮವಾಗಿ ಪೊತೇನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಬುಧವಾರ ಸಂಪ್ರದಾಯಬದ್ಧ ಗಂಗಾ ಆಹ್ವಾನ ಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಯಾವುದೇ ನೆರವು ಅಥವಾ ಸಹಾಯವಿಲ್ಲದೆ, ಸಂಪೂರ್ಣವಾಗಿ ಜನರ ಸಹಭಾಗಿತ್ವ ಮತ್ತು ಸಮುದಾಯದ ಬೆಂಬಲದೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆರೆಗಳಿಂದ ತೆಗೆಯುವ ಪೋಷಕಾಂಶಯುಕ್ತ ಮಣ್ಣನ್ನು ಕೃಷಿ ಜಮೀನುಗಳಿಗೆ ಬಳಸಿಕೊಳ್ಳುವ ಮಹತ್ವ ಹಾಗೂ ಸಾಂಪ್ರದಾಯಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಟ್ರಸ್ಟ್ ಅಧ್ಯ ವೇಣುಗೋಪಾಲ್ ಅವರು, ಕೆರೆ ಮಣ್ಣಿನ ತಾಂತ್ರಿಕ ಲಾಭಗಳನ್ನು ವಿವರಿಸಿದರು. ಒಂದು ಟ್ರಾಕ್ಟರ್ ಲೋಡ್ ಮಣ್ಣು ಒಂದು ಚೀಲ ಕಾಂಪೋಸ್ಟ್ , ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಸಮಾನವಾಗಿದೆ. ಇದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ, ಇದು ಸಹಜ ಮತ್ತು ಸಾಸ್ಯೋತ್ಪಾದನೆಗೆ ಉತ್ತೇಜನ ನೀಡಿ ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಟ್ರಸ್ಟ್ ಉಪಾಧ್ಯ ಸಂಜೀವ್ ರೆಡ್ಡಿ ಮಾತನಾಡಿ, ಪುನರುಜ್ಜೀವನಗೊಂಡ ಕೆರೆಗಳು ಗ್ರಾಮ ಮಟ್ಟದಲ್ಲಿ ಜಲ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುತ್ತವೆ. ಜನರು, ಪಶು&ಪಗಳು ಹಾಗೂ ಮೀನುಗಾರಿಕೆಗೆ ಸಹ ಉಪಯುಕ್ತವಾಗುತ್ತವೆ ಎಂದು ಹೇಳಿದರು.
90 ಎಕರೆ ವಿಸ್ತೀರ್ಣವಿರುವ ಪೋತೇನಹಳ್ಳಿ ಕೆರೆಯಲ್ಲಿ ಸುಮಾರು 8,16,000 ಟನ್ ಮಣ್ಣು ತೆಗೆಯುವುದರಿಂದ 36 ಕೋಟಿ ಲೀಟರ್ ನೀರು ಸಂಗ್ರಹಗೊಳ್ಳಲಿದೆ.