ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ನಿತಿನ್ ವೆಂಕಟೇಶ್, ಹೊಲದಪ್ಪ, ಈ.ಪಿ. ಲೋಕೇಶ್, ಡಿ.ಟಿ ಸ್ವಾಮಿ ಇತರರಿದ್ದರು. 
ರಾಜ್ಯ

ಕೆರೆ ತುಂಬಿಸುವ ಯೋಜನೆಯಿಂದ ಕೃಷಿಗೆ ಅನುಕೂಲ

ಬೆಟ್ಟದಪುರ:

ರೈತರ ಹಿತದೃಷ್ಟಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಆರಂಭಗೊಂಡ ಕೆರೆ ತುಂಬಿಸುವ ಯೋಜನೆಯು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಸ್ತೆ, ಸೇತುವೆ, ಕುಡಿಯುವ ನೀರು, ನೀರಾವರಿ ಸೇರಿದಂತೆ ಹಲವು ಶಾಶ್ವತ ಅಭಿವೃದ್ಧಿ ಕೆಲಸ ತಾಲೂಕಿಗೆ ನೀಡಲಾಗಿದೆ ಎಂದರು.
ಅಭಿವೃದ್ಧಿ ಕಾರ್ಯಗಳ ಜತೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಸೇರಿದಂತೆ ವಿವಿಧ ಜನಪರ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಪಡೆದುಕೊಳ್ಳಬೇಕು. ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪುವಂತೆ ಅಧಿಕಾರಿಗಳು ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ರೈತರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳು, ಸಹಾಯಧನ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸರ್ಕಾರ ಜನಪರ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗದಿಂದ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲಿದೆ ಎಂದು ಹೇಳಿದರು.
ಈಚೂರು ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು. ಸಭೆಯಲ್ಲಿ ಗ್ರಾಮಸ್ಥರು ವಿವಿಧ ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸ್ಥಳೀಯ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಕೆ.ವೆಂಕಟೇಶ್, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ಕರೆಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಸ್ಪಂದಿಸಿ ಶೀಘ್ರದಲ್ಲಿ ಪರಿಹಾರ ಕಲ್ಪಿಸಬೇಕು. ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ ಸರ್ಕಾರದ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಸೂಚನೆ ನೀಡಿದರು. ಅಲ್ಲದೆ, ಸಮುದಾಯ ಭವನ ಸೇರಿದಂತೆ ಗ್ರಾಮದ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾದ ಹೊಲದಪ್ಪ ಹಾಗೂ ಈ.ಪಿ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ ಸ್ವಾಮಿ, ರಹಮತ್, ಜಾನ್‌ಬಾಬು, ಮುಖಂಡರಾದ ಶಂಕರ್, ಚಿಕ್ಕೇಗೌಡ, ಕರಿಯಯ್ಯ, ಪುಟ್ಟರಾಜೇ ಅರಸ್, ಚಂದ್ರಶೇಖರ ಅರಸ್, ಕೃಷ್ಣೇಗೌಡ, ದೇವರಾಜು, ರಾಜೇ ಅರಸ್, ಲೋಕೋಪಯೋಗಿ ಇಲಾಖೆ ಎಇಇ ಯೋಗಾನಂದ, ಎಇ ದಿನೇಶ್, ಲ್ಯಾಂಡ್ ಆರ್ಮಿ ಇಂಜಿನಿಯರ್ ವಿಜಯ್ ಕುಮಾರ್, ಸುಗಂಧರಾಜ್, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೋಮಯ್ಯ, ವೃತ್ತ ನಿರೀಕ್ಷಕ ಎಂ.ಕೆ ದೀಪಕ್, ಅಬಕಾರಿ ನಿರೀಕ್ಷಕ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.