ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ  
ರಾಜ್ಯ

ಆಗಸ್ಟ್, ಸೆಪ್ಟೆಂಬರ್‌ನಲ್ಲೂ ಮಳೆ ಅಭಾವ: ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲು-Lack of rain

ಬೆಂಗಳೂರು: ಮಳೆ ಅಭಾವದಿಂದ ಈಗಾಗಲೇ ಬರ ಎದುರಿಸುತ್ತಿರುವ ಕರುನಾಡಿಗೆ ಕಹಿ ಸುದ್ದಿ ಹೊರಬಿದ್ದಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಇನ್ನಷ್ಟು ಮಳೆ ಕೊರತೆ ಉಂಟಾಗಲಿದೆ. ವಾಡಿಕೆಗಿಂತ ತಾಪಮಾನವೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿದುಬಂದಿದೆ.

ರಾಜ್ಯದಲ್ಲಿ ಮುಂಗಾರು ಆಗಮಿಸಿ 2 ತಿಂಗಳು ಮುಗಿದಿದೆ. ಮಳೆ ಕುಂಠಿತ ಪರಿಣಾಮ ರಾಜ್ಯದಲ್ಲಿ ಬೇಸಿಗೆ ವಾತಾವರಣ ಈಗಾಗಲೇ ಕಾಣಿಸಿಕೊಂಡಿದೆ. ಮೋಡಗಳು ಇದ್ದರೂ ಮಳೆ ಬೀಳುತ್ತಿಲ್ಲ. ಇದರಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಬಹುತೇಕ ಜಲಾಶಯಗಳು ಮತ್ತು ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪಡುವ ಆತಂಕ ಎದುರಾಗಲಿದೆ.
ರಾಜ್ಯಾದ್ಯಂತ ಜೂ 1ರಿಂದ ಜು.31ವರೆಗೆ ವಾಡಿಕೆಯಂತೆ 471 ಮಿಮೀ ಮಳೆಯಾಗಬೇಕಿತ್ತು. ಆದರೆ, 308 ಮಿಮೀ ಸುರಿದಿದ್ದು, ಶೇ.35 ಮಳೆ ಅಭಾವ ಉಂಟಾಗಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ,ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ದಾವಣಗೆರೆ ಸೇರಿ ರಾಜ್ಯದ 27 ಜಿಲ್ಲೆಗಳಿಂದ 168 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಕರಾವಳಿ ಶೇ.30, ಮಲೆನಾಡು ಶೇ.41, ಉತ್ತರ ಕರ್ನಾಟಕ ಶೇ.25 ಮತ್ತು ದಕ್ಷಿಣ ಕರ್ನಾಟದಲ್ಲಿ ಶೇ.40 ಮಳೆ ಕುಂಠಿತವಾಗಿದೆ.ರಾಜ್ಯದ ಇತರ ಜಿಲ್ಲೆಗಳಕ್ಕಿಂತ ವಿಜಯನಗರದಲ್ಲಿ ಅಧಿಕ ಮಳೆ ಕೊರತೆ ಉಂಟಾಗಿದೆ.

ಮುಂದಿನ 2 ತಿಂಗಳು ರಾಜ್ಯದಲ್ಲಿ ಮಳೆ ಕೊರತೆ ಸಂಭವನೀಯತೆ ಶೇ.50 ಇದೆ. ಆಗಸ್ಟ್‌ನಲ್ಲಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆ ಬೀಳಬಹುದು. ಜತೆಗೆ, ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಲಿದೆ. ಹವಾಮಾನ ಅಸಮತೋಲನಕ್ಕೆ ‘ಎಲ್ ನಿನೋ ಕಾರಣ.

ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.