ಅಲಗಾಪುರ ಗ್ರಾಮದ ಕೆರೆಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಉದ್ದನೂರು ಪ್ರಸಾದ್, ಶಾಗ್ಯ ರವಿ, ನಾಗೇಂದ್ರಬಾಬು, ಮಹದೇವಪ್ಪ ಇತರರಿದ್ದರು.  
ರಾಜ್ಯ

ಅಭಿವೃದ್ಧಿ ಇಲ್ಲದೆ ಕೆರೆಯಲ್ಲಿ ನೀರು ಸಂಗ್ರಹಕ್ಕೆ ತೊಡಕು

ಹನೂರು: ಕೆರೆಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ಶೀಘ್ರ ತೆರವುಗೊಳಿಸುವ ಮೂಲಕ ಗಡಿಯನ್ನು ಗುರುತಿಸಿ ನೀರು ಸಂಗ್ರಹಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಅಲಗಾಪುರ ಗ್ರಾಮದ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕೆರೆಗೆ ಶನಿವಾರ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿ ಮಾತನಾಡಿದರು.

ಈ ಭಾಗದ 239 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ 40 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಈ ಕೆರೆಯು ಅಭಿವೃದ್ಧಿಯನ್ನು ಹೊಂದದ ಪರಿಣಾಮ ನೀರು ಸಂಗ್ರಹಕ್ಕೆ ತೊಡಕಾಗಿ ಪರಿಣಮಿಸಿರುವುದು ನಿಜಕ್ಕೂ ವಿಪರ್ಯಾಸ. ಕೆರೆಯನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಕಾಯಕಲ್ಪ ಅಗತ್ಯವಾಗಿದೆ. ಇದರಿಂದ ಮಳೆಗಾಲದ ವೇಳೆ ನೀರು ಸಂಗ್ರಹಣೆಯಿಂದ ಅಂತರ್ಜಲ ಮಟ್ಟ ವೃದ್ಧಿಸಲಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ. ಆದ್ದರಿಂದ ಕೆರೆಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರೆವುಗೊಳಿಸುವುದರ ಮೂಲಕ ಸರ್ವೇ ಕಾರ್ಯ ನಡೆಸಿ ಸುತ್ತಲು ಬಂಡ್ ನಿರ್ಮಾಣ ಮಾಡಿ ಗಡಿ ಗುರುತಿಸಬೇಕು. ಈ ಕೆಲಸ ಶೀಘ್ರಗತಿಯಲ್ಲಿ ಆಗಬೇಕು ಎಂದು ಭೂ ಮಾಪನ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಅವರಿಗೆ ಸೂಚಿಸಿದರು. ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ ಕೆಲವು ಮಹಿಳೆಯರಿಗೆ ಗ್ರಾಮ ಪಂಚಾಯಿತಿಗೆ ಮನೆಗಳು ಮಂಜೂರಾದ ಕೂಡಲೇ ಮನೆ ದೊರಕಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮುಖಂಡರಾದ ಶಾಗ್ಯ ರವಿ, ನಾಗೇಂದ್ರಬಾಬು, ಮಹದೇವಪ್ಪ, ಜಸ್ಸಿಂಪಾಷ, ತಮ್ಮಯ್ಯ, ಶಂಕರಪ್ಪ, ರಾಚಪ್ಪ, ನಾಗರಾಜು, ನಾಗಯ್ಯ ಇತರರು ಇದ್ದರು.