ಬಕ್ಕ ಅಂಗನವಾಡಿ ಕೇಂದ್ರದ ಸಮೀಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಡಿಕೇರಿ ಪ್ರಸನ್ನ ಮಾತನಾಡಿದರು.
- ಉದ್ಯಮಿ, ಸಮಾಜ ಸೇವಕ ಎಡಿಕೇರಿ ಪ್ರಸನ್ನ
- ಬಕ್ಕ ಅಂಗನವಾಡಿ ಕೇಂದ್ರದ ಸಮೀಪ
ನಾಪೋಕ್ಲು: ಕೈಲ್ ಮುಹೂರ್ತಕ್ಕೆ ಒಂದು ವಿಶಿಷ್ಟತೆ ಇದ್ದು, ಜಿಲ್ಲೆಯಲ್ಲಿ ಎಲ್ಲರೂ ಸಾಮೂಹಿಕವಾಗಿ ಆಚರಿಸುವುದರಿಂದ ಇದು ಸಾಮರಸ್ಯಕ್ಕೆ ಮುನ್ನುಡಿ ಇಡಲಿದೆ ಎಂದು ಉದ್ಯಮಿ, ಸಮಾಜ ಸೇವಕ ಎಡಿಕೇರಿ ಪ್ರಸನ್ನ ಹೇಳಿದರು.
ಬೆಟ್ಟಗೇರಿಯ ಬಕ್ಕ ಕ್ರೀಡಾ ಸಂಘ, ಶ್ರೀಕೃಷ್ಣ ಸಂಕ್ರಾಂತಿ ಸ್ವಾಗತ ಸಾಗರ್ ಸ್ವಸಹಾಯ ಸಂಘ, ಅಂಬಿಕಾ ಸ್ತ್ರೀ ಶಕ್ತಿ ಸಂಘ, ಗಜಾನನ ಭಕ್ತ ಮಂಡಳಿ ಸಹಯೋಗದಲ್ಲಿ ಬಕ್ಕ ಅಂಗನವಾಡಿ ಕೇಂದ್ರದ ಸಮೀಪ ಆಯೋಜಿಸಿದ್ದ 20ನೇ ವರ್ಷದ ಕೈಲ್ ಮುಹೂರ್ತ ಆಟೋಗಳ ಸ್ಪರ್ಧೆ 2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಳೆಗಾಲದಲ್ಲಿ ರೈತರು ವಿಶೇಷ ಶ್ರಮವಹಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರ ದಣಿವಿನ ಆಯಾಸವನ್ನು ನೀಗಿಸಿಕೊಳ್ಳಲು ಕೈಲ್ ಮುಹೂರ್ತದಲ್ಲಿ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ರೈತರು ತಮ್ಮ ಕಷ್ಟ ಮರೆತು ಒಗ್ಗೂಡಿ ಆಚರಿಸುವ ಹಬ್ಬ ಇದಾಗಿದೆ ಎಂದು ತಿಳಿಸಿದರು.
ಕಾವೇರಿ ಸಂಕ್ರಮಣ, ಹುತ್ತರಿ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ. ಊರ ಜನರು ಕೂಡಿ ಸಾಮರಸ್ಯಕ್ಕೆ ನಾಂದಿ ಹಾಡುವ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಬರಬೇಕು ಎಂದು ಹೇಳಿದರು.
ಸಮಾರಂಭವನ್ನು ಕಾಫಿ ಬೆಳೆಗಾರ ಕಬ್ಬಚ್ಚಿರ ಸವರಿನ್ ಉತ್ತಯ್ಯ ಉದ್ಘಾಟಿಸಿದರು. ಬಕ್ಕ ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ಡೆಲಿವಿ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರೀಶ್ ಗೌಡ ಕಂಬಳ, ನಿವೃತ್ತ ಶಿರಸ್ತೇದಾರ್ ಕಡ್ಲೆರ ಧನವತಿ ಚಂದ್ರಶೇಖರ್, ಬಾಡನ ಸತೀಶ್, ನಿವೃತ್ತ ಆಧ್ಯಾಪಕಿ ಬೈಚನ ತಂಗಮ್ಮ ಸೋಮಣ್ಣ, ನಿವೃತ್ತ ಸರ್ಕಾರಿ ನೌಕರೆ ಪುದಿಯ ನೆರವನ ಜಯಲಕ್ಷ್ಮೀ ಚಂದ್ರಶೇಖರ್, ಪ್ರಗತಿಪರ ರೈತ ಎಡಿಕೇರಿ ಪ್ರವೀಣ್, ಹಿರಿಯ ಕ್ರೀಡಾಪಟು ಪ್ರಕಾಶ್ ರೈ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ 2025 26 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಳಾದ ಕುಂಜಿಲನ ಮೇಘಾ ಜನಾರ್ದನ, ಬಾಡನ ಸಿಂಚನಾ ಹರೀಶ್, ವಿ.ಜಿ.ವೃಷ್ಟಿ, ಬಿ.ಕೆ.ಜಸ್ಮಿತಾ ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಇದಕ್ಕೂ ಮೊದಲು ಗ್ರಾಮೀಣ ಆಟೋಟ ಸ್ಪರ್ಧೆಯನ್ನು ಬೆಟ್ಟಗೇರಿ ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಪೌಡಟಡ ಡಾಲಿ ಭೀಮಯ್ಯ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕ್ರೀಡಾಕೂಟಕ್ಕೆ ಕಾಫಿ ಬೆಳೆಗಾರ ಸೂದನ ಸುಜಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ಬಕ್ಕ ಕ್ರೀಡಾ ಸಂಘದ ಅಧ್ಯಕ್ಷ ಬೈತಡ್ಕ ಡೆಲಿವಿ ದೇವಯ್ಯ, ಕಾಫಿ ಬೆಳಗಾರ ಕುಂಜಿಲನ ಲೋಕನಾಥ್, ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕಿ ನೈಯಣಿ ಶಾಂತಿ ಅರ್ಜುನ, ನಿವೃತ್ತ ಸೈನಿಕ ಹೊಸೋಕ್ಲು ಮೊಣ್ಣಪ್ಪ, ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿಟಿ ಗಿರೀಶ್ ಇದ್ದರು.