ಶಾದಿಪುರದಿಂದ ಕುಂಚಾವರಂ ಕ್ರಾಸ್ವರೆಗಿನ ರಸ್ತೆಯಲ್ಲಿ ಅಪಘಾತದಿಂದ ನಜ್ಜುಗುಜ್ಜಾಗಿರುವ ಲಾರಿ.
- ಬೃಹತ್ ವಾಹನಗಳ ಓಡಾಟದಿಂದ ರೋಡ್ ಹಾಳು
- ವನ್ಯಜಿವಿಗಳಿಗೂ ಕಿರಿಕಿರಿ
ಚಿಂಚೋಳಿ : ಕುಂಚಾವರಂ ಕ್ರಾಸ್ನಿಂದ ಶಾದಿಪುರವರೆಗಿನ ರಸ್ತೆ ಅಪಘಾತ ಮಾರ್ಗವಾಗಿ ಮಾರ್ಪಟ್ಟಿದ್ದು, ನಿತ್ಯ ಬೃಹತ್ ವಾಹನಗಳ ಸಂಚಾರದಿಂದ ಸ್ಥಳಿಯ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.
ಸುಮಾರು 18 ಕಿಮೀ. ರಸ್ತೆ ಇದಾಗಿದ್ದು, ನಿರಂತರ ಬೃಹತ್ ಗಾತ್ರದ ಸರಕು ಸಾಗಣೆ ವಾಹನ ತಿರುಗಾಟ ನಡೆಸುತ್ತಿವೆ. ಇದರಿಂದ ರಸ್ತೆ ಹಾಳಾಗಿದೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ಡಾಂಬರ್ ಕಿತ್ತುಹೋಗಿದೆ. ಅಲ್ಲದೆ ದಟ್ಟವಾದ ಅರಣ್ಯದ ಒಡಲಲ್ಲಿ ರೋಡ್ ಹಾದು ಹೋಗುವುದರಿಂದ ವಾಹನಗಳ ಅತಿಯಾದ ಸದ್ದು, ಮಾಲಿನ್ಯದಿಂದ ವನ್ಯಜಿವಿಗಳ ಮುಕ್ತ ಸಂಚಾರಕ್ಕೂ ಅಡ್ಡಿ ಉಂಟುಮಾಡುತ್ತಿದೆ.
ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಸಾರಿಗೆ ಸಂಚಾರ ವಿಳಂಬವಾಗುತ್ತಿದ್ದು, ಶಾಲಾ& ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಚೇರಿಗೆ ಹೋಗುವ ನೌಕರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಹದಗೆಟ್ಟ ರಸ್ತೆ ಸರಿಪಡಿಸಬೇಕು. ಬೃಹತ್ ವಾಹನಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
"
ಪ್ರಸ್ತುತ ಬೃಹತ್ ಗಾತ್ರದ ವಾಹನಗಳ ಸಂಚಾರದಿಂದ ವನ್ಯಜಿವಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅತಿ ವೇಗ, ಶಬ್ದ ಮಾಲಿನ್ಯದಿಂದ ಪ್ರಾಣಿಗಳಿಗೆ ಕಿರಿಕಿರಿ ಆಗುತ್ತದೆ. ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕಿದ್ದು, ಈ ನಿಟ್ಟಿನಲ್ಲಿ ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದೇವೆ.
— ಸುನೀಲಕುಮಾರ ಚವ್ಹಾಣ್, ಎಎಸ್ಎಫ್, ಚಿಂಚೋಳಿ ವಿಭಾಗ