Tere Mere Sapne programme
- * ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿಕೆ
- * ರಾಜ್ಯಾದ್ಯಂತ 178 ಸಾಂತ್ವನ ಕೇಂದ್ರಗಳಲ್ಲಿ ಸೌಲಭ್ಯ
ರಾಜ್ಯದಲ್ಲಿ ಗೌರವಯುತ ಮತ್ತು ದೃಢವಾದ ವೈವಾಹಿಕ ಸಂಬಂಧಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ ‘ತೇರೆ ಮೇರೆ ಸಪ್ನೆ - ಕೂಡಿ ಬಾಳೋಣ’ ವಿವಾಹಪೂರ್ವ ಸಂವಹನ ಯೋಜನೆ ಜಾರಿಗೆ ತಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಬಾಲಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಾಂತ್ವನ ಕೇಂದ್ರಗಳ ಸಲಹೆಗಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಯೋಜನೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದರು.
ವೇಗದ ಸಾಮಾಜಿಕ ಪರಿಸರದಲ್ಲಿ ಮದುವೆಗೆ ಮುನ್ನ ಯುವಜನರಲ್ಲಿ ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಹಾಗೂ ಧನಾತ್ಮಕ ಸಂವಹನ ಬೆಳೆಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 178 ಸಾಂತ್ವನ ಕೇಂದ್ರಗಳಲ್ಲಿ ವಿವಾಹಪೂರ್ವ ಸಂವಹನ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಉಚಿತ ಸಮಾಲೋಚನೆ ಒದಗಿಸುವ ಮೂಲಕ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಲು ಕ್ರಮವಹಿಸಲಾಗುವುದು. ಯುವಜನರು ಮದುವೆಗೂ ಮುನ್ನ ಜೀವನಕೌಶಲಗಳನ್ನು ರೂಢಿಸಿಕೊಳ್ಳುವುದು, ಆರ್ಥಿಕ ಯೋಜನೆ ಹಾಗೂ ದೈನಂದಿನ ಕೌಟುಂಬಿಕ ಸಮಸ್ಯೆಗಳನ್ನು ಪ್ರಬುದ್ಧತೆಯಿಂದ ಪರಿಹರಿಸಿಕೊಳ್ಳಲು ಈ ಕೇಂದ್ರಗಳು ಮಾರ್ಗದರ್ಶನ ನೀಡಲಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ನಿರ್ದೇಶಕಿ ಸ್ನೇಹಾ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹಾಜರಿದ್ದರು.
* ಆರೋಗ್ಯಕರ ವೈವಾಹಿಕ ಜೀವನಕ್ಕೆ ಪೂರಕವಾಗಿ ವಿವಾಹ ಆಗಲಿರುವ ಜೋಡಿಗಳಲ್ಲಿ ಪರಸ್ಪರ ತಿಳಿವಳಿಕೆ, ಗೌರವ ಮತ್ತು ಭಾವನಾತ್ಮಕ ಸಿದ್ಧತೆಯನ್ನು ಬೆಳೆಸುವುದು.
* ಜವಾಬ್ದಾರಿಗಳ ಹಂಚಿಕೆ, ಆರ್ಥಿಕ ನಿರ್ವಹಣೆ ಮತ್ತು ಉದ್ಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ರಚನಾತ್ಮಕ ಸಮಾಲೋಚನೆ ನಡೆಸುವುದರ ಬಗೆಗೆ ಜಾಗೃತಿ ಮೂಡಿಸುವುದು.
* ಪ್ರಬುದ್ಧ ಸಂವಾದ ಹಾಗೂ ವೃತ್ತಿಪರ ಮಾರ್ಗದರ್ಶನದ ಮೂಲಕ ಕೌಟುಂಬಿಕ ಕಲಹಗಳನ್ನು ತಡೆದು, ಲಿಂಗ-ಸೂಕ್ಷ್ಮ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸುವ ಬಗೆಗೆ ಸಲಹೆ ನೀಡುವುದು.
ವಿಚ್ಛೇದನ ತಗ್ಗಿಸಲು ಸಮಾಲೋಚನೆ
ಮದುವೆ ಕೇವಲ ಆಡಂಬರಕ್ಕೆ ಸೀಮಿತವಾಗದೆ, ಉತ್ತಮ ಕೌಟುಂಬಿಕ ಜೀವನಕ್ಕೆ ಬುನಾದಿಯಾಗಬೇಕು. ಈ ನಿಟ್ಟಿನಲ್ಲಿ ‘ತೇರೆ ಮೇರೆ ಸಪ್ನೆ- ಕೂಡಿ ಬಾಳೋಣ’ ಕಾರ್ಯಕ್ರವದ ಮೂಲಕ ವಿವಾಹಕ್ಕೂ ಮುನ್ನ ಭಾವಿ ದಂಪತಿಯಲ್ಲಿ ಪರಸ್ಪರ ಅರಿವು, ಸಂವಹನ, ಭಿನ್ನಾಭಿಪ್ರಾಯಗಳ ಪರಿಹಾರ, ಭಾವನಾತ್ಮಕ ಸಿದ್ಧತೆ, ಪರಸ್ಪರ ಗೌರವ ಸೇರಿ ಸುಖಕರ ಕೌಟುಂಬಿಕ ಜೀವನಕ್ಕೆ ಅಗತ್ಯವಾದ ಸಲಹೆಗಳನ್ನು ನೀಡಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.
ಉತ್ತಮ ಸಂವಹನ ಮತ್ತು ನಂಬಿಕೆ ಬಲವಾದ ಕುಟುಂಬದ ಅಡಿಪಾಯವಾಗಿದೆ. ‘ತೇರೆ ಮೇರೆ ಸಪ್ನೆ- ಕೂಡಿ ಬಾಳೋಣ’ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಸಿದ್ಧತೆ ನಡೆಸಿದೆ. ಇದರೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗವು 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 285ಕ್ಕೂ ಅಧಿಕ ಕೇಂದ್ರಗಳಿಗೆ ಮಾರ್ಗದರ್ಶನ ನೀಡಿದಂತಾಗಿದೆ.
— -ವಿಜಯ ರಹತ್ಕರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ