ಯಳಂದೂರು ಸಮೀಪದ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಎಚ್.ವಿ. ಚಂದ್ರು ಇತರರು ಇದ್ದರು.
ಯಳಂದೂರು: ಕುದೇರು, ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೈಗಾರಿಕಾ ವಲಯಗಳು ಸ್ಥಾಪನೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವಿದೆ. ಇದು ಕುದೇರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸನಿಹವಾಗಿದೆ. ಕೈಗಾರಿಕೆ ಬೆಳೆದಂತೆ ಇಲ್ಲಿಗೂ ವಿಸ್ತರಿಸುವ ಅವಕಾಶವಿದೆ. ಇಲ್ಲಿ ಪಾಲಿಟೆಕ್ನಿಕ್ ಅಥವಾ ಐಟಿಐ ಕಾಲೇಜು ತೆರೆಯಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಕುದೇರು ಸ್ವಾತಂತ್ರೃ ಪೂರ್ವದಿಂದಲೂ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದ ಗ್ರಾಮವಾಗಿದೆ. ನನ್ನ ತಂದೆ ಬಿ.ರಾಚಯ್ಯ ಅವರು ಓದಿರುವ ಶಾಲೆಯು ಈ ಗ್ರಾಮದಲ್ಲೇ ಇದೆ. ಈಗ ಇಲ್ಲಿದ್ದ ಸರ್ಕಾರಿ ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿಗೆ 2020-21 ನೇ ಸಾಲಿನ ರಾಜ್ಯ ಬಂಡವಾಳ ವೆಚ್ಚದಡಿ 1.31 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲಾಗಿದೆ. ಇದು ಸಂಪೂರ್ಣ ವಿಜ್ಞಾನ ವಿಭಾಗದ ಕಟ್ಟಡವಾಗಿದ್ದು ಮೂರು ಕೊಠಡಿ, ಮೂರು ಲ್ಯಾಬ್ ಕೊಠಡಿಗಳು, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಗೃಹ ನಿರ್ಮಾಣಗೊಂಡಿದೆ. ಇಲ್ಲಿರುವ ಪ್ರಾಂಶುಪಾಲರು, ಉಪನ್ಯಾಸಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಶಾಲೆಗೆ ಸುತ್ತುಗೋಡೆ, ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಕಾಂಕ್ರೀಟ್ ಟೈಲ್ಸ್‌ನ ರಸ್ತೆ, ಗೇಟ್‌ನ ದುರಸ್ತಿ ಹಾಗೂ ಮೈದಾನ ಅಭಿವೃದ್ಧಿ ಸೇರಿದಂತೆ ಇತರ ಕೆಲಸಗಳನ್ನು ಮಾಡಿಸುವಂತೆ ಮನವಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಇಲ್ಲಿರುವ ಸರ್ಕಾರ ಪ್ರಥಮ ದರ್ಜೆ ಕಾಲೇಜಿನ ಮೇಲಂತಸ್ತಿನ ಕಟ್ಟಡಕ್ಕೂ 2 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಶಾಸಕರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಅಲ್ಲದೆ ಕ್ಷೇತ್ರ ವ್ಯಾಪ್ತಿಯ ಕುದೇರು, ಕೆಸ್ತೂರು ಹಾಗೂ ಹೊಂಗನೂರು ಗ್ರಾಮಕ್ಕೆ ಕೆಪಿಎಸ್ ಶಾಲೆಗಳು ಮಂಜೂರಾಗಿದೆ. ಇಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಸದನದಲ್ಲಿ ಮಾತನಾಡಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಆದಷ್ಟು ಬೇಗ ಇದೂ ಕೂಡ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದರು.
ಕಾಲೇಜು ಸಮಿತಿ ಸದಸ್ಯ ರಾಜೇಂದ್ರಸ್ವಾಮಿ, ಪ್ರಾಂಶುಪಾಲ ಶಿವಪ್ರಕಾಶ್ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಎಸ್. ಸುರೇಶ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ ನಾಗರಾಜು, ತಾಪಂ ಮಾಜಿ ಸದಸ್ಯ ಮಹದೇವಯ್ಯ, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಕಾಂಗ್ರೆಸ್ ಒಬಿಸಿ ಜಿಲ್ಲಾಧ್ಯಕ್ಷ ಬಡಗಲಮೋಳೆ ಚೇತನ್, ಅಶೋಕ್, ಸುರೇಶ್, ತಮ್ಮಯ್ಯ, ಶಂಕರಮೂರ್ತಿ, ವಾಸುಪಾಲ್, ನೇಮಿರಾಮ್, ಉಪನ್ಯಾಸಕರಾದ ಮಂಜುನಾಥ್, ಪುಷ್ಪಲತಾ, ರಾವೀಂದ್ರ, ಮಹೇಶ್‌ರಾವ್ ಅರಸ್ ಇತರರು ಇದ್ದರು.