KSRTC new package tour to Jog Falls
- ಜೋಗ್ ಫಾಲ್ಸ್‌ಗೆ ಕೆಎಸ್‌ಆರ್‌ಟಿಸಿಯ ಹೊಸ ಪ್ಯಾಕೇಜ್ ಟೂರ್.
- ಆಗಸ್ಟ್ 8ರಿಂದ ನಾನ್-ಎಸಿ ಸ್ಲೀಪರ್‌ನಲ್ಲಿ ಬೆಂಗಳೂರು-ಜೋಗ್ ಫಾಲ್ಸ್ ವೀಕೆಂಡ್ ಸೇವೆ.
- ವಯಸ್ಕರಿಗೆ 3,300ರೂ. ಪ್ಯಾಕೇಜ್ ದರ 6 ರಿಂದ 12 ವರ್ಷದ ಮಕ್ಕಳಿಗೆ 3ಸಾವಿರ ರೂ. ಶುಲ್ಕ ನಿಗದಿ.
ಸಾಗರ: ಭೋರ್ಗರೆವ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಬೇಕು... ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ನೀರು, ಮಂಜಿನಂತೆ ಮೇಲೇಳುವ ನೀರು, ರಾಜ, ರಾಣಿ ರೋರರ್ ಮತ್ತು ರಾಕೆಟ್ನ ವೈಭವ, ಶಿವಮೊಗ್ಗದ ಸೌಂದರ್ಯ ಕಾಣಬೇಕು ಎನ್ನುವ ಆಸೆ. ಆದರೆ, ಒಬ್ಬೊಬ್ಬರೇ ಪ್ರಯಾಣಿಸುವುದು ಬಲು ಬೇಸರ. ಬಸ್ನಲ್ಲಿ ಹೇಗೆ ತೆರಳೋದು, ರಕ್ಷಣೆ ಇರುತ್ತಾ ಎನ್ನುವ ಗೊಂದಲಗಳಿಂದ ಕನಸುಗಳನ್ನು ಇನ್ನೂ ಕಟ್ಟಿಟ್ಟವರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ.
ಹೌದು, ಆಗಸ್ಟ್ 8ರಿಂದ ಬೆಂಗಳೂರು-ಜೋಗ್ ಫಾಲ್ಸ್ವರೆಗೂ ವೀಕೆಂಡ್ ಸೇವೆ ನೀಡಲು ಕೆಎಸ್ಆರ್ಟಿಸಿ ಮುಂದಾಗಿದೆ. ಕಡಿಮೆ ದರದಲ್ಲಿ, ಊಟದ ವ್ಯವಸ್ಥೆ ಜೊತೆಗೆ ಮಲೆನಾಡಿನ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರವಾಸದ ಟಿಕೆಟ್ ದರವೆಷ್ಟು?
ನಾನ್ ಎಸಿ ಸ್ಲೀಪರ್ ಬಸ್ಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗ, ಸಾಗರ ಮಾರ್ಗವಾಗಿ ಜೋಗ ಜಲಪಾತಕ್ಕೆ ತೆರಳಲಾಗುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ವೆಚ್ಚ ಸೇರಿ ವಯಸ್ಕರು 3,300 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಇನ್ನು 6 ರಿಂದ 12 ವರ್ಷದ ಮಕ್ಕಳಿಗೆ 3ಸಾವಿರ ರೂಪಾಯಿ ಪ್ರಯಾಣ ಶುಲ್ಕ ವಿಧಿಸಲಾಗಿದೆ.
ಬಸ್ ಹೊರಡುವ ಸಮಯವೇನು?
ಆಗಸ್ಟ್ 8ರಿಂದ ಈ ಸೇವೆ ಆರಂಭವಾಗಲಿದ್ದು, ಬೆಂಗಳೂರಿನಿಂದ ರಾತ್ರಿ 10:30ಕ್ಕೆ ಹೊರಡುವ ಬಸ್, ಮುಂಜಾನೆ 5.30ಕ್ಕೆ ಸಾಗರ ತಲುಪಲಿದೆ. ಬೆಳಗಿನ ಉಪಹಾರ ಸೇವಿಸಿದ ಬಳಿಕೆ ಸಾಗರದ ವರದಹಳ್ಳಿ ಮೂಲಕ ಇಕ್ಕೇರಿ ಮಾರ್ಗವಾಗಿ ಜೋಗ ಜಲಪಾತಕ್ಕೆ ತೆರಳಲಾಗುತ್ತದೆ.
ಮಧ್ಯಾಹ್ನ ಊಟದ ಬಳಿಕೆ ಜಲಪಾತ ವೀಕ್ಷಣೆ, ಸಂಜೆ ಸಾಗರದಲ್ಲಿ ಶಾಪಿಂಗ್ ಅವಕಾಶ ಇನ್ನೂ ರಾತ್ರಿ ಹತ್ತಕ್ಕೆ ಬೆಂಗಳೂರಿನತ್ತ ಪ್ರಯಾಣ ಆರಂಭಿಸಲಾಗುತ್ತದೆ. ಮುಂಜಾನೆ 5ಕ್ಕೆ ಬೆಂಗಳೂರು ತಲುಪಲಿದೆ.
ಇಲ್ಲಿ ಸಂಪರ್ಕಿಸಿ
ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಲಾಗಿದೆ, ಈ ವೀಕೆಂಡ್ ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ, ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಅಥವಾ www.karnataka.gove.inಗೆ ಭೇಟಿ ನೀಡಬಹುದಾಗಿದೆ. ಅಲ್ಲದೆ 080-26252625 ಹಾಗೂ 7760990100, 7760990560, 7760990287 ಸಂಪರ್ಕ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು ಎಂದು ಕೆಎಸ್‌ಆರ್ಟಿಸಿ ಬೆಂಗಳೂರು ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, (ಏಜೆನ್ಸೀಸ್).