ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿ.
ಬೆಂಗಳೂರು: ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿ. (ಕೆಎಸ್‌ಎಂಸಿಎ), ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೃಜನಶೀಲ ಆರ್ಥಿಕ ಸಹಭಾಗಿತ್ವ ಒಡಂಬಡಿಕೆಗೆ ಸಹಿ ಹಾಕಿದೆ.
ನವದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೆಎಸ್‌ಎಂಸಿಎ ಅಧ್ಯಕ್ಷ ಮತ್ತು ಶಾಸಕ ಸತೀಶ್ ಕೃಷ್ಣ ಸೈಲ್ ಮಾರ್ಗದರ್ಶನದಲ್ಲಿ ಎಂಡಿ ಬಿ. ಆನಂದ್, ಬ್ರಿಕ್ಸ್ ಸಿಸಿಐಯ ಅಧ್ಯಕ್ಷ ಮತ್ತು ಬ್ರಿಕ್ಸ್ ವುಮನ್ಸ್ ಬಿಸಿನೆಸ್ ಅಲಯನ್ಸ್-ದಕ್ಷಿಣ ಆಫ್ರಿಕಾದ ಕಾರ್ಯಕಾರಿ ಅಧ್ಯಕ್ಷೆ ಈ ಒಪ್ಪಂದಕ್ಕೆ ಸಹಿ ಮಾಡಿದರು.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೃಜನಶೀಲ ಆರ್ಥಿಕ ಸಹಭಾಗಿತ್ವದ ಭಾಗವಾಗಿ ‘ಸ್ಕ್ರೀನ್ ಟು ಮಾರ್ಕೆಟ್’ ಕಾರ್ಯಕ್ರಮವು ಪ್ರಮುಖ ತಾಂತ್ರಿಕ,ಅನುಷ್ಠಾನ ಯೋಜನೆಯಾಗಿ ಗುರುತಿಸಲಾಗಿದೆ. ಮಾಧ್ಯಮ, ಮನರಂಜನೆ, ಡಿಜಿಟಲ್ ಕಂಟೆಂಟ್, ಉದ್ಯಮಶೀಲತೆ, ನವೋದ್ಯಮ, ವ್ಯಾಪಾರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಸೇರಿ ಹಲವು ರಂಗಗಳಲ್ಲಿ ಎರಡು ದೇಶಗಳ ನಡುವೆ ಸಹಕಾರ ವೃದ್ಧಿಸಲಾಗಲಿದೆ.
ಸೃಜನಶೀಲ ವೃತ್ತಿಪರರು, ಉದ್ಯಮಿಗಳಿಗೆ ಹೊಸ ಅವಕಾಶ ಕಲ್ಪಿಸಲು ಜ್ಞಾನ ವಿನಿಮಯ, ಉದ್ಯಮ ಸಂಪರ್ಕ, ಮಾರುಕಟ್ಟೆ ಅಭಿವೃದ್ಧಿ ಹಾಗೂ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಾಗುತ್ತದೆ.
ಸೃಜನಶೀಲ ಕ್ಷೇತ್ರವನ್ನು ವಿಷಯ ನಿರ್ಮಾಣಕ್ಕೆ ಸೀಮಿತಗೊಳಿಸದೆ, ವಾಣಿಜ್ಯೀಕರಣಗೊಳಿಸಿ ಜಾಗತಿಕ ಮಾರುಕಟ್ಟೆಗೆ ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಸರ್ಕಾರಿ ಸಂಸ್ಥೆಯಾದ ಕೆಎಸ್‌ಎಂಸಿಎ, ಜಾಹೀರಾತು, ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ತಂತ್ರಾತ್ಮಕ ಸಂಪರ್ಕ ಕ್ಷೇತ್ರದ ಸುದೀರ್ಘ ಪರಿಣತಿ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ವೃದ್ಧಿಸಲು ಮುಂದಾಗಿದೆ. ಈ ಒಪ್ಪಂದವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವ್ಯಾಪಾರಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಹೊಸ ಹಾದಿ ತೆರೆದಿದೆ.