KSCA ಚುನಾವಣೆ: ಬ್ರಿಜೇಶ್ ಟೀಮ್ ರೆಡಿ ಕೆ.ಎನ್. ಶಾಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಬೆಂಗಳೂರು: ನವೆಂಬರ್ 30ರಂದು ನಿಗದಿಯಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) 2025-28ರ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಲು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಅನುಭವಿ ಕ್ರೀಡಾ ಆಡಳಿತಗಾರ ಬ್ರಿಜೇಶ್ ಪಟೇಲ್ ಮುಂದಾಳತ್ವದ ಬಣ (ಟೀಮ್ ಬ್ರಿಜೇಶ್) ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕೆ.ಎನ್.ಶಾಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಇವರ ನೇತೃತ್ವದಲ್ಲಿ ಎಲ್ಲ 16 ಸ್ಥಾನಗಳಿಗೆ ತಂಡ ಚುನಾವಣೆ ಎದುರಿಸಲಿದೆ.
ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ ನೈತಿಕ ಹೊಣೆ ಹೊತ್ತು ಖಜಾಂಚಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇ.ಎಸ್.ಜೈರಾಮ್, ಈ ಬಾರಿ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲಿದ್ದಾರೆ. ಹಾಲಿ ಆಡಳಿತ ಮಂಡಳಿಯ ಸದಸ್ಯ ಎಂ.ಎಸ್. ವಿನಯ್ (ಖಜಾಂಚಿ), ಬೆಂಗಳೂರು ಟರ್ ಕ್ಲಬ್‌ನ ಮಾಜಿ ಚೇರ್ಮನ್ ಡಿ. ವಿನೋದ್ ಶಿವಪ್ಪ (ಉಪಾಧ್ಯಕ್ಷ), ಬಿಸಿಸಿಐ ರಾಷ್ಟ್ರೀಯ ಪ್ಯಾನೆಲ್ ಅಂಪೈರ್ ಬಿ.ಕೆ. ರವಿ (ಜಂಟಿ ಕಾರ್ಯದರ್ಶಿ) ಇತರ ಪ್ರಮುಖ ಸ್ಥಾನಕ್ಕೆ ಚುನಾವಣೆಯ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ವಿಜಯವಾಣಿಗೆ ಅಧಿಕೃತ ಮಾಹಿತಿ ದೊರೆತಿದೆ.
ಆಡಳಿತ ಮಂಡಳಿಯ ಇತರ ಸದಸ್ಯ ಸ್ಥಾನಕ್ಕೆ ಬೆಂಗಳೂರು ವಲಯದಿಂದ ರಾಜ್ಯದ ಮಾಜಿ ಕ್ರಿಕೆಟಿಗೆ ತಿಲಕ್ ನಾಯ್ಡು, ಹಾಲಿ ಸದಸ್ಯ ಸಂಜಯ್ ಪೌಲ್, ಕೆ.ಎಸ್ ಕೇದರನಾಥ್, ರಾಹುಲ್ ಪಿ ಬ್ನ, ವೈ.ಜಗನ್ನಾಥ ಸ್ಪರ್ಧೆಗಿಳಿಯಲಿದ್ದಾರೆ. ಕೆಎಸ್‌ಸಿಎಯ ಜಿಲ್ಲಾ ವಲಯಗಳಿಂದ ಹರಿಕೃಷ್ಣ ಕುಮಾರ್ ಆರ್.ಕೆ (ಮೈಸೂರು), ಡಿ.ಎಸ್.ಅರುಣ್ (ಶಿವಮೊಗ್ಗ), ವೀರಣ್ಣ ಎಸ್ ಸವದಿ (ಹುಬ್ಬಳ್ಳಿ-ಧಾರವಾಡ), ಎನ್.ಅಶೋಕ್ (ತುಮಕೂರು), ಕುಶಾಲ್ ಪಾಟೀಲ್ ಗದ್ಗಿ (ರಾಯಚೂರು), ಶೇಖರ್ ಐ. ಶೆಟ್ಟಿ (ಮಂಗಳೂರು) ಸ್ಪರ್ಧಿಸುವುದು ಖಾತ್ರಿಗೊಂಡಿದೆ.