ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಅಡಗೂರು ಬಸವರಾಜು ಮಾತನಾಡಿದರು.
ಬೇಲೂರು: ಬಗರ್‌ಹುಕುಂ ಅಕ್ರಮದ ಹೆಸರಲ್ಲಿ ಉದ್ದೇಶಪೂರ್ವಕವಾಗಿ ರಾಜಕೀಯ ಪಿತೂರಿಯಿಂದಾಗಿ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಅವರನ್ನು ಸಿಲುಕಿಸಿ, ಬಂಧಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಅಡಗೂರು ಬಸವರಾಜು ಆರೋಪಿಸಿದರು.
2013ರಿಂದ 2023ರ ಅವಧಿಯ ಬಗರ್ ಹುಕುಂ ಹೆಸರಲ್ಲಿ 2,750 ಅರ್ಜಿಗಳು ವಿಲೇವಾರಿಯಾಗಿವೆ. ಆದರೆ ಕೆ.ಎಸ್.ಲಿಂಗೇಶ್ ಶಾಸಕರಾಗಿದ್ದ ಅವಧಿಯಲ್ಲಿ 200ರಿಂದ 250 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಒಟ್ಟಾರೆಯಾಗಿ ತಾಲೂಕಿನಲ್ಲಿ 26 ಸಾವಿರ ಅರ್ಜಿಗಳು ಬಾಕಿ ಇದ್ದು, ಅವುಗಳಲ್ಲಿ 10 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. 16 ಸಾವಿರ ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ಎಲ್ಲ ಅರ್ಜಿಗಳ ಕುರಿತು ಕ್ರಮಕೈಗೊಳ್ಳದ ತಾಲೂಕು ಆಡಳಿತ ಕೇವಲ ಕೆ.ಎಸ್.ಲಿಂಗೇಶ್‌ರವರ ಮೇಲೆಯೇ ದ್ವೇಷ ರಾಜಕಾರಣಕ್ಕಾಗಿ ಬಲಿಪಶು ಮಾಡುತ್ತಿರುವುದು ಖಂಡಿಸುತ್ತೇವೆ ಎಂದರು.
ರೈತ ಪರ ಹೋರಾಟಗಳಲ್ಲಿ ಭಾಗವಹಿಸಿ, ಜನಪರ ಕಾರ್ಯಗಳಲ್ಲಿ ತೊಡಗಿರುವ ವ್ಯಕ್ತಿಯ ವಿರುದ್ಧ ಬಂಧನದಂತಹ ಕ್ರಮ ನ್ಯಾಯವಲ್ಲ. ಕೆ.ಎಸ್.ಲಿಂಗೇಶ್ ಅವರನ್ನು ತಕ್ಷಣ ಬಿಡುಗಡೆಗೊಳಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಹಾಸಭಾದ ತಾಲೂಕು ಉಪಾಧ್ಯಕ್ಷ ಯೋಗೀಶ್ ಮಾತನಾಡಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಬಂಧನ ಖಂಡಿಸುತ್ತೇವೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ರೈತರ ಪರ ನಿರಂತರ ಹೋರಾಟ ನಡೆಸಿ, ಸಮಸ್ಯೆಗಳಿಗೆ ಸ್ಪಂದಿಸಿ ನೀರಾವರಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಗರ್ ಹುಕುಂ ಮಂಜೂರಾತಿಯಲ್ಲಿ ಯಾವುದೇ ದೊಡ್ಡ ಮಟ್ಟದ ತಪ್ಪುಗಳು ನಡೆದಿಲ್ಲ. ಒಂದು ವೇಳೆ ಸಣ್ಣಪುಟ್ಟ ದೋಷಗಳಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ದೊಡ್ಡದಾಗಿ ರಾಜಕಾರಣಕ್ಕಾಗಿ ಬಿಂಬಿಸಲಾಗತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಮದನ್ ಬಳ್ಳೂರು, ಖಜಾಂಚಿ ರಾಜಣ್ಣ, ಯುವ ಘಟಕದ ಅಧ್ಯಕ್ಷ ಚೇತನ್ ಇದ್ದರು.