ಆಲಮಟ್ಟಿಯ ಎಡದಂಡೆ ಕಾಲುವೆ ಮುಖಾಂತರ ಕಾಲುವೆಗೆ ನೀರು ಬಿಡುತ್ತಿರುವುದು. 
ರಾಜ್ಯ

ಕಾಲುವೆಯಿಂದ ಕೆರೆಗಳಿಗೆ ಹರಿದ ಕೃಷ್ಣಾ ನೀರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಿವಾನಂದ ಪಾಟೀಲ ಮನವಿಗೆ ಸ್ಪಂದನೆ
  • ಅನ್ನದಾತರಲ್ಲಿ ಮೂಡಿದ ಮಂದಹಾಸ
ಆಲಮಟ್ಟಿ: ಭೀಕರ ಬರಗಾಲದಿಂದ ಬಸವಳಿದಿದ್ದ ರೈತರಿಗೆ ಗುರುವಾರ ಕಾಲುವೆಗಳ ಮೂಲಕ ಅವಳಿ ಜಿಲ್ಲೆಗಳಲ್ಲಿನ ಒಟ್ಟು 189 ಕೆರೆಗಳನ್ನು ತುಂಬಿಸಲು ನೀರು ಹರಿಬಿಟ್ಟಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.
ಬರಗಾಲದ ಬವಣೆಯಿಂದ ಜನ-ಜಾನುವಾರುಗಳ ಕುಡಿಯುವ ನೀರಿಗೂ ತೊಂದರೆಯಾಗುವ ಆತಂಕದಲ್ಲಿದ್ದ ರೈತರಿಗೆ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಆರಂಭಿಸಿರುವುದರಿಂದ ರೈತರ ಆತಂಕ ಅಲ್ಪಮಟ್ಟಿಗೆ ದೂರವಾದಂತಾಗಿದೆ.
ರಾಜ್ಯದಲ್ಲಿ ಅಲ್ಪಸ್ವಲ್ಪ ಸುರಿದ ಮಳೆಯಿಂದ ವರುಣನ ನಂಬಿ ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರ ಮಳೆಯಾಗದೇ ಇರುವುದರಿಂದ ಬೆಳೆಗಳು ಒಣಗಲಾರಂಭಿಸಿದ್ದು, ಕಾಲುವೆಗಳ ಮೂಲಕ ಕೆರೆ ತುಂಬಿಸುತ್ತಿರುವುದರಿಂದ ಕೆರೆಗಳು ತುಂಬಿ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ಬಾವಿ ಮತ್ತು ಬೋರ್‌ವೆಲ್‌ಗಳಿಗೆ ನೀರು ಬರುತ್ತವೆ.
ಹಲವಾರು ದಿನಗಳಿಂದ ಕುಡಿಯುವ ನೀರಿಗಾಗಿ ರೈತ ಸಂಘಗಳು ಹೋರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು, ಇತ್ತೀಚಿಗೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಸಹಿತ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಜು.15ರಂದು ಶಾಸಕ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಬೆಳಗಾವಿ ಪ್ರಾದೇಶಿಕ ಆಯುಕ್ತರು ಅವಳಿ ಜಿಲ್ಲೆಗಳ ಕುಡಿಯುವ ನೀರಿಗಾಗಿ 3.7ಟಿಎಂಸಿ ನೀರನ್ನು ಆಲಮಟ್ಟಿ ಏತ ನೀರಾವರಿ ಕಾಲುವೆಗಳ ಮುಖಾಂತರ ಬಿಡುಗಡೆ ಮಾಡಲು ಆದೇಶಿಸಿದೆ ಎಂದು ಕೆಬಿಜೆಎನ್‌ಎಲ್ ಮೂಲಗಳು ತಿಳಿಸಿವೆ.