ದೇವದುರ್ಗ ತಾಲೂಕಿನ ಕೃಷ್ಣಾ ನದಿ ಒಡಲಿನಲ್ಲಿ ಈಜಾಡುತ್ತಿರುವ ಜನರು. 
ರಾಜ್ಯ

ಬಿರು ಬಿಸಿಲಿಗೆ ಕೃಷ್ಣೆ ಒಡಲು ಜೀವಸೆಲೆ

ಪ್ರಮುಖ ಮುಖ್ಯಾಂಶಗಳು

  • ನದಿಯಲ್ಲಿ ಈಜಾಡಿ ಕೂಲ್ ಆಗುವ ಜನ
  • ಮೇವಿಗಾಗಿ ಜಾನುವಾರುಗಳ ಅಲೆದಾಟ
ದೇವದುರ್ಗ: ಏಪ್ರಿಲ್‌ಗಿಂತ ಮೇ ನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ತಾಲೂಕಿನಲ್ಲಿ ಕಾದ ಹಂಚಿನ ಮೇಲೆ ನೀರು ಎರೆದಂಥ ಶಾಖದ ಅನುಭವ ಜನರಿಗಾರುತ್ತಿದೆ.
ಬೇಗೆಯಿಂದ ಪಾರಾಗಲು ನಾನಾ ಕಸರತ್ತು ನಡೆಸುತ್ತ ಒಂದೆಡೆ ತಂಪುಪಾನೀಯ, ಮರದ ನೆರಳಿನ ಆಶ್ರಯ ಪಡೆಯುತ್ತಿದ್ದರೆ, ಮತ್ತೊಂದೆಡೆ ಕೃಷ್ಣೆ ಒಡಲಿಗೆ ಮಕ್ಕಳಾದಿಯಾಗಿ ಎಲ್ಲರೂ ಮೊರೆಹೋಗುತ್ತಿದ್ದಾರೆ. 
ನೀರಾವರಿ ಪ್ರದೇಶಕ್ಕೆ ತಾಲೂಕು ಒಳಪಟ್ಟಿದ್ದರೂ, ಮರದ ನೆರಳಿನ ಕೊರತೆಯಿಂದ ಸುಡುಬಿಸಿಲು ಜನರನ್ನು ಹೈರಾಣ ಮಾಡಿದೆ. ತಂಪಾದ ನೆಮ್ಮದಿಗಾಗಿ ಯುವಕರು ನದಿ, ಬಾವಿ, ಕೆರೆ, ಹಳ್ಳ, ಕಾಲುವೆಯಲ್ಲಿ ಈಜಾಡುತ್ತಿದ್ದಾರೆ. ಜಾನುವಾರುಗಳು ಮೇವು, ಜೀವಜಲ ಹುಡುಕಿ ಹಳ್ಳಕೊಳ್ಳ ಅಲೆಯುತ್ತಿವೆ.
ಕೃಷ್ಣಾ ನದಿ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳ ಮೂಲಕ 57 ಕಿ.ಮೀ. ವ್ಯಾಪ್ತಿ ಹರಿಯುವುದರಿಂದ ಸುತ್ತಮುತ್ತಲಿನ ಹಳ್ಳಿಗಳ ಜನರು, ನದಿದಂಡೆ ಗ್ರಾಮಸ್ಥರು ಮಿಂದೇಳುತ್ತಿದ್ದಾರೆ. ತಿಂಥಣಿ ಬ್ರಿಡ್ಜ್, ಚಿಂಚೋಡಿ, ವೀರಗೋಟ, ಲಿಂಗದಹಳ್ಳಿ, ಬಾಗೂರು, ಗೋಪಳಾಪುರ, ಅಂಜಳ, ಕೊಪ್ಪರ, ಹೂವಿನಹೆಡಗಿ, ಜೋಳದಹೆಡಗಿ, ಕೋಣಚಪ್ಪಳಿ, ಗಾಗಲ್, ಗೂಗಲ್ ಹಳ್ಳಿಗರು ಈಜುತ್ತಿದ್ದಾರೆ. 
ಪಟ್ಟಣದ ಪುರಾತನ ಕೆರೆ, ಬಾವಿ, ಚಿಕ್ಕಹೊನ್ನಕುಣಿ, ಕಕ್ಕಲದೊಡ್ಡಿ, ಮುಷ್ಟೂರು, ಗಬ್ಬೂರು, ಗಲಗ ಸೇರಿ ವಿವಿಧೆಡೆ ಪುರಾತನ ಬಾವಿಗಳೂ ಜನರನ್ನು ಕೈಬೀಸಿ ಕರೆಯುತ್ತಿವೆ. ಆರಂಭದಲ್ಲಿ ಪಟ್ಟಣದ ವಿವಿಧೆಡೆ ಕುಡಿವ ನೀರಿನ ಅರವಟ್ಟಿಗೆ ಅಳವಡಿಸಲಾಗಿತ್ತು.
ನಂತರ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಕೆಲವೆಡೆ ಫೋಟೋ ಶೂಟ್‌ಗೆ ಸೀಮಿತವಾಗಿವೆ. ಕಲ್ಲಂಗಡಿ, ಎಳೆನೀರು, ತಂಪು ಪಾನೀಯ ಬೇಡಿಕೆ ಹೆಚ್ಚಾಗಿದೆ.  

ಬಿಸಿಲು ಹೆಚ್ಚಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆ ಬರುವುದು ಸಹಜ. ಆತಂಕಪಡುವ ಅಗತ್ಯವಿಲ್ಲ. ನೀರಿನ ಅಂಶ ಹೆಚ್ಚಿರುವ ಹಾಗೂ ಹಣ್ಣಿನ ಪದಾರ್ಥ ಹೆಚ್ಚಾಗಿ ಸೇವಿಸಬೇಕು. ಆಗಾಗ ನೀರು ಕುಡಿಯಬೇಕು. ಇಲ್ಲದಿದ್ದರೆ ಸನ್ ಸ್ಟ್ರೋಕ್, ನಿಶ್ಯಕ್ತಿಯಾಗುವ ಸಾಧ್ಯತೆಯಿದೆ. ಉಷ್ಣ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ತುರ್ತು ಘಟಕ ಪ್ರಾರಂಭಿಸಿದ್ದೇವೆ.

— ಬನದೇಶ್ವರ ಟಿಎಚ್‌ಒ, ದೇವದುರ್ಗ