- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ
- ಒಪ್ಪಂದ ಮಾಡಿಕೊಂಡ ಅಭ್ಯರ್ಥಿ ಒಎಂಆರ್ ಶೀಟ್ ತಿದ್ದುಪಡಿ
- ಅಂತಿಮ ಆಯ್ಕೆ ಪಟ್ಟಿ ವೇಳೆ ಅಧ್ಯಕ್ಷರ ಹಸ್ತಕ್ಷೇಪ
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಸೇರಿ ಸಾಲು ಸಾಲು ಹಗರಣಗಳ ತನಿಖೆ ಎದುರಿಸುತ್ತಿರುವ ಕೆಪಿಎಸ್‌ಸಿ, ಕಳೆದ ಮೂರು ವರ್ಷದಲ್ಲಿ ನಡೆದ ನಾಲ್ಕು ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ.
ಕಳೆದ 2022ರಿಂದ 2025ರವರೆಗೆ ನಡೆದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಹೊರಡಿಸಿದ ಅಧಿಸೂಚನೆ ದಿನಾಂಕದಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿವರೆಗಿನ ಅವಧಿಯಲ್ಲಿ ಅಕ್ರಮ ನಡೆಸಲಾಗಿದೆ.
ಸರ್ಕಾರಿ ಹುದ್ದೆಗೆ ಆಯ್ಕೆಯಾಗುವ ಬಗ್ಗೆ ಲಕ್ಷಾಂತರ ಅಭ್ಯರ್ಥಿಗಳ ಕನಸು ಹೊಂದಿರುವವರಿಗೆ ಆಯ್ಕೆ ಮಾಡುವ ಆಯೋಗ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಹಾದಿ ಹಿಡಿದೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಿಂದ ಹಿಡಿದು ಗೆಜೆಟೆಡ್ ಪ್ರೊಬೇಷನರಿ ಹುದ್ದೆವರೆಗೂ ಅಕ್ರಮದ ಸರಣಿ ಆರಂಭಿಸಿರುವ ಆಯೋಗದ ಕರ್ಮಕಾಂಡ ಒಂದೊಂದಾಗಿ ಬಯಲಾಗುತ್ತಿವೆ. ಇದಕ್ಕೆ ಪೂರಕ ಎಂಬಂತೆ ಪರೀಕ್ಷಾ ನಿಯಂತ್ರಕರ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿಗಳು ಈ ಹಗರಣದಲ್ಲಿ ಪರೋಕ್ಷವಾಗಿ ಪಾಲ್ಗೊಂಡಿರುವ ಆರೋಪವಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕರ ಅಭಿಯಂತರರ ನೇಮಕಾತಿಯಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಮಾಡಲಾಗಿದೆ. 3.9.2022ರಂದು ಸಹಾಯಕ ಕಾರ್ಯಪಾಲಕರ ಅಭಿಯಂತರರ (ಗ್ರೇಡ್-1) 18 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆ ಪೈಕಿ ಹೈ.ಕ 7 ಹುದ್ದೆಗಳು ಸೇರಿದ್ದವು. ಪರೀಕ್ಷೆ ನಂತರ ಅಭ್ಯರ್ಥಿಗಳ ಒಎಂಆರ್ ತಿದ್ದುಪಡಿ ಮಾಡಲಾಗಿದೆಯೆಂದು ಆಕ್ಷೇಪಿಸಲಾಗಿತ್ತು.
ಈ ಕುರಿತು ಆಯೋಗದ ಕಾರ್ಯದರ್ಶಿ ಅವರು 22.2.2024ರಂದು ಅಂತಿಮ ಆಯ್ಕೆ ಪಟ್ಟಿ ತಡೆಹಿಡಿಯುವಂತೆ ಇಲಾಖೆಗೆ ತಿಳಿಸಿದ್ದರು. ಇದನ್ನು ಪ್ರಶ್ನಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 25.06.2024ರಂದು ಆಪಾದಿತ ಅಭ್ಯರ್ಥಿಗಳ ಅರ್ಜಿ ಸಂಖ್ಯೆ ಸಮೇತ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೈ.ಕ ವೃಂದದ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆ ವೇಳೆ 17.11.2024ರಂದು ಸಿಂಧನೂರು ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ ಸಿಬ್ಬಂದಿ, ಅಧಿಕಾರಿಗಳು ಪ್ರಶ್ನೆ ಪತ್ರಿಕೆ ವಿತರಿಸುವಲ್ಲಿ ಲೋಪವೆಸಗಿದ್ದರು. ಈ ಕುರಿತು ರಾಜ್ಯಾದ್ಯಂತ ಕರ್ನಾಟಕ ಲೋಕಸೇವಾ ಯೋಗದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಪರೀಕ್ಷಾ ಸಂದರ್ಭದಲ್ಲೇ ಲೋಪ ಎಸಗಿರುವ ಕುರಿತು ಆಯೋಗದ ಉಪ ಸಮಿತಿ ವರದಿ ನೀಡಿತ್ತು. ಅದರಂತೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಿಗಳಿಗೆ ಆಯೋಗ ಕೊರಿತ್ತು. ಅಧಿಕಾರಿಗಳ ವಿರುದ್ಧ ಕೆವಲ ಶಿಸ್ತುಕ್ರಮ ಮಾತ್ರ ಕೈಗೊಂಡು ಈ ಪ್ರಕರಣವನ್ನು ಇಲ್ಲಿಗೆ ಕೈ ಬಿಡಲಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ:
ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವ 63 ಹುದ್ದೆಗಳಿಗೆ ಸಂಬಂಧಿಸಿದಂತೆ 15.3.2024ರಂದು ಪ್ರತ್ಯೇಕ ಅಧಿಸೂಚನೆ ಆಯೋಗ ಹೊರಡಿಸಿತ್ತು. ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 12.7.2025ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿತ್ತು. 13.7.2025ರಂದು ಒಎಂಆರ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ, 21.1.2026ರಂದು 1:3 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ 19.2.2026ರಂದು ಮೂಲ ದಾಖಲೆ ಪರಿಶೀಲನೆ ನಡೆಸಲಾಗಿತ್ತು.
ಆದರೆ, ಮೂಲ ದಾಖಲೆ ಪರಿಶೀಲನೆ ವೇಳೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್, ಮಗಳಾದ ಕುಮಾರಿ ಸುಮಾ ಎಸ್.ಸಾಹುಕಾರ್ ಇವರು ಪರೀಕ್ಷೆ ಬರೆದಿದ್ದರು.
ಈ ವೇಳೆ ಆಯೋಗಕ್ಕೆ ಅಭ್ಯರ್ಥಿ ಸಲ್ಲಿಸಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರವು ನೈಜತೆಯಿಂದ ಕೂಡಿರುವುದಿಲ್ಲವೆಂದು ಕಂಡು ಬಂದಿತ್ತು. ಅವರು ಸಲ್ಲಿಸಿರುವ 3ಬಿ/ಡಬ್ಲೂೃ ಪ್ರಮಾಣ ಪತ್ರದಲ್ಲಿ ಕುಟುಂಬದ ಆದಾಯ 40 ಸಾವಿರ ಎಂದು ನಮೂದಿಸಲಾಗಿತ್ತು. 2019ರಲ್ಲಿ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ಮೂಲ ವೇತನ, ಇತರೆ ಭತ್ಯೆ ಸೇರಿ 2,25,000 ರೂ.ಪಡೆಯುತ್ತಿದ್ದರು. ಇದರಿಂದ ಅವರ ಮಗಳು ಸರ್ಕಾರಿ ಹುದ್ದೆ ಪಡೆಯಲು ನಕಲಿ ಆದಾಯ, ಜಾತಿ ಪತ್ರ ಸಲ್ಲಿಸಿದಾರೆ. ಪರೀಕ್ಷಾ ದುರ್ನಡತೆಗಾಗಿ ಕುಮಾರಿ ಸುಮಾರ ಸಾಹುಕಾರ್ ಇವರ ಮೇಲೆ ಶಿಸ್ತು ಕ್ರಮಕೈಗೊಂಡಿರುವುದಲ್ಲದೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿತ್ತು. ಇದರಿಂದ ನೇಮಕಾತಿ ಪ್ರಕ್ರಿಯೇಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
ಪಶುಸಂಗೋಪನೆ 400 ಹುದ್ದೆ ನೇಮಕ:
ಪಶುವೈದ್ಯ ಅಧಿಕಾರಿಗಳ 400 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 29.7.2024ರಂದು ಅಧಿಸೂಚನೆ ಹೊರಡಿಸಲಾಗಿತ್ತು. 8.1.2026ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು 9.1.2026ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. 12.2.2026ರಂದು 1.:3 ಅನುಪಾತದಲ್ಲಿ ಅರ್ಹತೆ ಹೊಂದಿರುವ ಒಟ್ಟು 621 ಅಭ್ಯರ್ಥಿಗಳ ಅರ್ಹತಾ ಪಟ್ಟಿ ಪ್ರಕಟಿಸಿ, 5.03.2026ರಿಂದ 10.03.2026ರ ವರೆಗೆ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಸಲಾಗಿತ್ತು. 26.05.2026ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆ ಪರಿಶೀಲಿಸಿ 17.07.2026ರಂದು ಅಂತಿಮ ಆಯ್ಕೆಪಟ್ಟಿಯನ್ನು ಆಯೋಗ ಪ್ರಕಟಿಸಿತ್ತು.
22.5.2026ರಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಪಶುವೈದ್ಯಾಧಿಕಾರಿಗಳ ಹುದ್ದೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ವಿಧಾನಸೌಧ ಠಾಣೆಯಲ್ಲಿ ಎ್ಐಆರ್ ದಾಖಲಿಸಿದ್ದರು. ಜೂನ್ ತಿಂಗಳಿಂದ ಹಿಡಿದು ಆಗಸ್ಟ್ ವರೆಗೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯರು ಸೇರಿ ಅಧಿಕಾರಿಗಳು, ಅಭ್ಯರ್ಥಿಗಳ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾದ ಬೆನ್ನಲ್ಲೇ ಅಕ್ರಮ ಬೆಳಕಿಗೆ ಬಂದಿತ್ತು. ಈಗ ಸಿಐಡಿ, ಇಡಿ ಅಧಿಕಾರಿಗಳ ತಂಡ ಹಲವು ಕಡೆ ದಾಳಿ ನಡೆಸಿ ತನಿಖೆ ಕೈಗೊಂಡಿವೆ.
ಆರ್‌ಡಿಪಿಆರ್ ಇಲಾಖೆಯ ಹೈ.ಕ ವೃಂದದ ಪಿಡಿಒ ನೇಮಕಾತಿ ವೇಳೆ ಆಯೋಗದ ಉಪ ಸಮಿತಿ ವರದಿಯನ್ವಯ ತಪ್ಪಿತಸ್ಥ ಮುಖ್ಯ ಶಿಕ್ಷಕರಾದ ರೇಖಾ ನಾವಳ್ಳಿ, ಮೇರಿ ಹರ್ಮಿಟಾ, ಶಂಕರಲಿಂಗೇಗೌಡ, ಸೇಡಂ ಬಿಇಒ ಬಸವರಾಜ್, ಸಹಾಯಕ ಪ್ರಾಧ್ಯಾಪಕರು ಸಕಾರಿ ಪದವಿ ಮಹಾವಿದ್ಯಾಲಯ ಸಿಂಧನೂರು ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನೇಮಕಾತಿ ಪ್ರಾಧಿಕಾರಿಕ್ಕೆ ಸೂಚನೆ ನೀಡಲಾಗಿದೆ.
ಪಶುವೈದ್ಯ ಅಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಿಐಡಿ, ಇಡಿ ತನಿಖೆ ಮುಂದುವರೆದಿದೆ.