ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣ: ಸಿಐಡಿ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ! KPSC
- KPSC ಪಶುವೈದ್ಯರ ನೇಮಕಾತಿ ಹಗರಣದ ಸತ್ಯಾಸತ್ಯತೆ ಹೊರತರಲು CID ತನಿಖೆಗೆ ರಾಜ್ಯ ಸರ್ಕಾರ ಆದೇಶ
- ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ಭ್ರಷ್ಟಾಚಾರ ಪ್ರಕರಣದ ತನಿಖೆ ಈಗ ಅಪರಾಧ ತನಿಖಾ ಇಲಾಖೆಯ ವಶಕ್ಕೆ
- ಪಶುವೈದ್ಯರ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ನೀಡಿ ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಪರೀಕ್ಷಾರ್ಥಿಗಳ ಶ್ರಮ ಹಾಗೂ ಅರ್ಹತೆಯನ್ನು ಬದಿಗೊತ್ತಿ ಅಕ್ರಮದ ಹಾದಿ ಹಿಡಿದ ಗಂಭೀರ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸರ್ಕಾರವು ಈ ಹಗರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸತ್ಯಾಸತ್ಯತೆಯನ್ನು ಹೊರತರಲು ಸಿಐಡಿ (CID) ತನಿಖೆಗೆ ಆದೇಶಿಸುವ ಮೂಲಕ ಅಕ್ರಮ ಎಸಗಿದವರ ನಿದ್ದೆಗೆಡಿಸಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಪ್ರತ್ಯೇಕ ಎಫ್‌ಐಆರ್‌ಗಳು (FIR) ದಾಖಲಾಗಿವೆ. ಪ್ರಕರಣದ ಸೂಕ್ಷ್ಮತೆಯನ್ನು ಅರಿತ ರಾಜ್ಯ ಡಿಜಿ ಮತ್ತು ಐಜಿಪಿ ಸಲೀಂ ಅವರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ ಹಸ್ತಾಂತರಿಸಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಇದೀಗ ಪೊಲೀಸರಿಂದ ಕೇಸ್ ಫೈಲ್‌ಗಳು ಹಾಗೂ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸುವ ಕಾರ್ಯ ಚುರುಕಿನಿಂದ ಸಾಗಿದೆ.
ಪಶುಸಂಗೋಪನೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಬೃಹತ್ ಮಟ್ಟದ ಅಕ್ರಮ ಹಾಗೂ ಹಣಕಾಸಿನ ವಹಿವಾಟು ನಡೆದಿದೆ ಎಂದು ಡಾ. ಮಂಜುನಾಥ್ ಎಂಬುವರು ಗಂಭೀರ ಆರೋಪ ಮಾಡಿ ದೂರು ನೀಡಿದ್ದರು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಿ, ಹಣ ಬಲದಿಂದ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಲಾಗಿದೆ ಎಂಬ ದೂರುಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು.
ಪ್ರಾಥಮಿಕ ತನಿಖೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿರುವ ಸುಮಾರು 21 ಜನರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸಂಶಯಾಸ್ಪದವಾಗಿದೆ ಎನ್ನಲಾಗಿದೆ. ಈ ಹಗರಣದ ಕಾವು ಕೆಪಿಎಸ್‌ಸಿ ಉನ್ನತ ಹುದ್ದೆಯಲ್ಲಿದ್ದವರಿಗೂ ತಟ್ಟಿದ್ದು, ಅಮಾನತುಗೊಂಡಿರುವ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಹಲವರನ್ನು ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಈ ಅಕ್ರಮದ ಬಗ್ಗೆ ರಾಜ್ಯದ ವಿಪಕ್ಷ ನಾಯಕರು ಕೂಡ ಧ್ವನಿ ಎತ್ತಿದ್ದರು. ಅಲ್ಲದೆ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳು ಕೂಡ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನು ಆರಂಭಿಸಿದ್ದರು. ಈ ವಿಚಾರ ದೊಡ್ಡದಾಗುವ ಮುನ್ನವೇ ಎಚ್ಚೆತ್ತುಕೊಂಡಿರುವ ಸರ್ಕಾರ ಸಿಐಡಿ ತನಿಖೆಗೆ ಆದೇಶ ಹೊರಡಿಸಿದೆ.
ಅಕ್ರಮದ ತನಿಖೆ ಮುಗಿದು ನೈಜ ಸತ್ಯ ಹೊರಬರುವವರೆಗೂ ಯಾವುದೇ ಅನರ್ಹರಿಗೆ ಲಾಭವಾಗಬಾರದು ಎಂಬ ಉದ್ದೇಶದಿಂದ ಪಶುವೈದ್ಯರ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಪ್ರಸ್ತುತ ಸಿಐಡಿ ಅಂಗಳ ತಲುಪಿರುವ ಈ ಹಗರಣದ ತನಿಖೆಯು, ಮುಂದಿನ ದಿನಗಳಲ್ಲಿ ಯಾವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಬುಡಕ್ಕೆ ಬೆಂಕಿ ಇಡಲಿದೆ ಎಂಬುದನ್ನು ಕಾದು ನೋಡಬೇಕಿದೆ.