ಜ್ಞಾನೇಂದ್ರ 
ರಾಜ್ಯ

ಕೆಪಿಎಸ್‌ಸಿ ಹಗರಣ ಜ್ಞಾನೇಂದ್ರಗೆ ಪ್ರಾಸಿಕ್ಯೂಷನ್ ಸಂಕಷ್ಟ

ಅಭಿಯೋಜನಾ ಮಂಜೂರಾತಿ ನೀಡಿ ಸಿಎಂ ಆದೇಶ, ಗಂಗ್ವಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಸಾಧ್ಯತೆ , ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳಿಂದ ತನಿಖೆ ಇನ್ನಷ್ಟು ಚುರುಕು

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷಾ ಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅನುಮತಿ ನೀಡಿದ್ದಾರೆ.

ಹಣದ ಆಸೆಗೆ ಅನರ್ಹರರನ್ನು ನೇಮಕ ಮಾಡುವ ಉದ್ದೇಶದಿಂದ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ರೂ. ಪಡೆದು ಭ್ರಷ್ಟಾಚಾರ ಎಸಗಿದ್ದರ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ), ರಾಜ್ಯದ ವಿಶೇಷ ತನಿಖಾ ತಂಡ (ಸಿಐಡಿ) ಕಳೆದ ಮೂರು ತಿಂಗಳಿಂದ ಪ್ರತ್ಯೇಕ ತನಿಖೆ ಕೈಗೊಂಡಿವೆ. ಆಯೋಗದ ಹಿಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ 400 ಪಶುವೈದ್ಯಾಧಿಕಾರಿ ಖಾಲಿ ಹುದ್ದೆಗಳ ನೇಮಕಾತಿ, ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ, ಸೋರಿಕೆ ಹಾಗೂ ಮಧ್ಯವರ್ತಿಗಳ ಮೂಲಕ ಒಳ ಒಪ್ಪಂದ ಮಾಡಿಕೊಂಡು ಅಕ್ರಮ ಎಸಗಿರುವ ಆರೋಪಗಳ ತನಿಖೆಗೆ ಭಾರತೀಯ ಸುರಕ್ಷಾ ಸಂಹಿತ (ಬಿಎನ್‌ಎಸ್) 2023ರ ಕಲಂ 218ರ ಅನ್ವಯ ಅಭಿಯೋಜನಾ ಮಂಜೂರಾತಿ ನೀಡಿ ಆದೇಶಿಸಿದ್ದಾರೆ.

ಜ್ಞಾನೇಂದ್ರಗೆ ಕಾನೂನು ಸಂಕಷ್ಟ:

ಕೆಪಿಎಸ್ಸಿ ಮೂಲಕ ನಡೆಯುವ ವಿವಿಧ ಇಲಾಖೆ ಪರೀಕ್ಷೆಗಳಲ್ಲೂ ಅಕ್ರಮ ಎಸಗಿರುವ ಕುರಿತು ಯುವಕರು ಆಯೋಗದ ಮೇಲಿನ ಭರವಸೆ ಕಳೆದುಕೊಳ್ಳುವಂತಾಗಿದೆ. ಭ್ರಷ್ಟಾಚಾರದ ಪ್ರಮುಖ ಪಾತ್ರಧಾರಿ ಜ್ಞಾನೇಂದ್ರ ಕುಮಾರ್ ಆಗಿರುವುದು ಇಡಿ ಅಧಿಕಾರಿಗಳು ನಡೆಸುತ್ತಿರುವ ತನಿಖೆಯಲ್ಲಿ ಬಯಲಿಗೆ ಬಂದಿದೆ. ಆದ್ದರಿಂದ ಈ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಾಸಿಕ್ಯೂಷನ್ ನಿರ್ಧಾರ ಕೈಗೊಂಡಿದೆ.

ಸಿಐಡಿ ವಶದಲ್ಲಿದ್ದ ಜ್ಞಾನೇಂದ್ರನನ್ನು ಇ.ಡಿ ಅಧಿಕಾರಿಗಳು ಸೆಪ್ಟಂಬರ್ 19 ರಂದು ಬಾಡಿ ವಾರಂಟ್ ಮೇಲೆ ಪಡೆದು 9ದಿನಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಸ್ಫೋಟಕ ವಿಷಯಗಳು ಹೊರ ಬಂದಿದ್ದವು. ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ ವಿರುದ್ಧ ನೀಡಿದ ಹೇಳಿಕೆ ಆಧಾರದ ಮೇಲೂ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಧ್ಯವರ್ತಿ ಬಸವರಾಜ್ ಕನ್ನಾಳೆಯೊಂದಿಗೆ ಸೇರಿ ಕೋಟ್ಯಂತರ ರೂ.ಲಂಚದ ಪಡೆದಿರುವ ಜ್ಞಾನೇಂದ್ರಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಿದೆ.

ಸಿಎಂ ಡಿಕೆಶಿ ‘ಏಕ್ಸ್’ ಖಾತೆ ಸಂದೇಶ:

ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆಯೂ ಇಲ್ಲ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಯುವಜನತೆಯ ಭವಿಷ್ಯದ ಜತೆ ಚೆಲ್ಲಾಟವಾಡುವ ಯಾವುದೇ ಘಟನೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಹಗರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮಬದ್ಧತೆಯಾಗಿದೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಆಡಳಿತಕ್ಕೆ ಕಪ್ಪು ಚುಕ್ಕೆ ತರುವ ಕೃತ್ಯಗಳಿಗೆ ಮನ್ನಣೆಯಿಲ್ಲ ಎಂದು ಮುಖ್ಯಮಂತ್ರಿಗಳ ಜಾಲತಾಣ ಖಾತೆಯಲ್ಲಿ ಸಂದೇಶ ಕಳುಹಿಸಿದ್ದಾರೆ.

ಪ್ರಾಸಿಕ್ಯೂಷನ್ ಮುಂದೇನು?

ಯಾವ ರೀತಿ ತನಿಖೆ?

* ಸರ್ಕಾರಿ ಅಧಿಕಾರಿ ತನ್ನ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಅಥವಾ ಯಾವುದೇ ಕಾನೂನುಬಾಹಿರ ಅಪರಾಧ ಎಸಗಿದಾಗ, ಅವರ ವಿರುದ್ಧ ನ್ಯಾಯಾಲಯದಲ್ಲಿ ಔಪಚಾರಿಕವಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭವಾಗಲಿದೆ.

* ಇದು ಕೇವಲ ಇಲಾಖಾ ತನಿಖೆಯಲ್ಲ, ಬದಲಿಗೆ ನ್ಯಾಯಾಲಯದಲ್ಲಿ ಅಪರಾಧವನ್ನು ಸಾಬೀತುಪಡಿಸಿ ಶಿಕ್ಷೆ ಕೊಡಿಸುವ ಪ್ರಕ್ರಿಯೆಯಾಗಿದೆ.

* ತನಿಖಾ ಸಂಸ್ಥೆಗಳ ದೂರಿನಲ್ಲಿ ಸತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ಪರಿಶೀಲನೆ ನಡೆಸಲಾಗುತ್ತದೆ.

*ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ, ಸಂಬಂಧಿಸಿದ ಕಚೇರಿ ಕಡತಗಳು, ಬ್ಯಾಂಕ್ ಖಾತೆಗಳು ಮತ್ತು ಆಸ್ತಿ ವಿವರ ವಶಪಡಿಸಿಕೊಂಡು ಪರಿಶೀಲನೆ ನಡೆಯುತ್ತದೆ.

* ಆರೋಪಿತ ಅಧಿಕಾರಿ ಮತ್ತು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಕಚೇರಿ ಅಥವಾ ಮನೆಗಳ ಮೇಲೆ ಪುನಃ ದಾಳಿ ನಡೆಸಿ ಹಣ ಅಥವಾ ದಾಖಲೆಗಳನ್ನು ಜಪ್ತಿ ಮಾಡಲಾಗುತ್ತದೆ.

* ಲಂಚದ ಪ್ರಕರಣವಾಗಿದ್ದರೆ ವಾಯ್ಸ್ ರೆಕಾರ್ಡಿಂಗ್, ಸಿನೋಪ್ಥಲಿನ್ ಪೌಡರ್ ಪರೀಕ್ಷೆ (ಟ್ರ್ಯಾಪ್) ಇತ್ಯಾದಿ ಡಿಜಿಟಲ್ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಬಳಸಲಾಗುತ್ತದೆ.

* ತನಿಖೆ ಪೂರ್ಣಗೊಂಡ ನಂತರ, ಅಧಿಕಾರಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೆ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುತ್ತವೆ.

* ಒಂದು ವೇಳೆ ತನಿಖೆಯಲ್ಲಿ ಯಾವುದೇ ತಪ್ಪು ಕಂಡುಬರದಿದ್ದರೆ ‘ಬಿ ರಿಪೋಟ್‌‘ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತದೆ.

*ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆ ಆರಂಭಿಸುತ್ತದೆ.

* ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ಮತ್ತು ಸಂತ್ರಸ್ತರ ಪರವಾಗಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸುತ್ತಾರೆ.

*ನ್ಯಾಯಾಂಗ ಪ್ರಕ್ರಿಯೆಯ ಕೊನೆಯಲ್ಲಿ ಅಪರಾಧ ಸಾಬೀತಾದರೆ ನ್ಯಾಯಾಲಯವು ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸುತ್ತದೆ.

ಸಾಹುಕಾರ್ ಮತ್ತು ಗೀತಾಗೆ ಹೆಚ್ಚಿದ ಆತಂಕ

ಐಎಎಸ್ ಅಧಿಕಾರಿ ವಿರುದ್ಧ ಸರ್ಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬೆನ್ನಲ್ಲೇ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ ಅವರಿಗೆ ಆತಂಕ ಹೆಚ್ಚಾಗಿದೆ. ಪ್ರಾಸಿಕ್ಯೂಷನ್ ಒಂದು ನಿರ್ದಿಷ್ಟವಾದ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ. ಆರೋಪಿ ಜ್ಞಾನೇಂದ್ರ ಒಟ್ಟಾರೆ ನಡೆದಿರುವ ಪರೀಕ್ಷಾ ಹಗರಣದಲ್ಲಿ ತಾನು ಒಬ್ಬನೆ ಪಾತ್ರಧಾರಿಯಲ್ಲ, ಇದರಲ್ಲಿ ಸಾಹುಕಾರ್ ಮತ್ತು ಗೀತಾ ಕೂಡ ಪಾಲುದಾರರು ಎಂಬ ಸತ್ಯಾಂಶ ಬಾಯಿಬಿಟ್ಟರೆ ಇವರಿಗೂ ಕಾನೂನು ಕುಣಿಕೆ ಇನ್ನಷ್ಟು ಗಟ್ಟಿಯಾಗಲಿದೆ ಎನ್ನಲಾಗಿದೆ. ಈಗಾಗಲೇ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ, ಚಿನ್ನಾಭರಣ ಖರೀದಿ, ಮಧ್ಯವರ್ತಿಯಿಂದ ಪಡೆದಿರುವುದು ಸೇರಿದಂತೆ ಗೀತಾ ಮತ್ತು ಸಾಹುಕಾರ್ ಅಭ್ಯರ್ಥಿಗಳಿಂದ 20 ರಿಂದ 40 ಲಕ್ಷ ರೂ.ವರೆಗೆ ಡೀಲ್ ಮಾಡಿರುವುದು, ತಮ್ಮಪರ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಲ್ಲಿ ಬರುವಂತೆ ಹೆಸರು, ನೋಂದಣಿ ಸಂಖ್ಯೆ ಜ್ಞಾನೇಂದ್ರ ನೀಡಿರುವುದು ಎಲ್ಲವನ್ನು ಪರಿಗಣಿಸುವ ಸಾಧ್ಯತೆ ಇದೆ. ಆದ್ದರಿಂದ ಪ್ರಾಸಿಕ್ಯೂಷನ್ ತನಿಖೆ ಅಂತಿಮ ಹಂತದ ಕೂತುಹಲ ಮೂಡಿಸಿದೆ.