ರಾಜ್ಯ

ಇಂದು ಕೆಪಿಎಸ್​ಸಿ ಪೂರ್ವಭಾವಿ ಪರೀಕ್ಷೆ; 345 ಕೇಂದ್ರಗಳು ಸಜ್ಜು: ಈ ಸೂಚನೆಗಳನ್ನೊಮ್ಮೆ ಓದಿ ಬಿಡಿ!

  • 319 ಗೆಜೆಟೆಡ್​ ಪ್ರೋಬೇಷನರ್​ ಹುದ್ದೆ

  • 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳು ಸಜ್ಜು

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 319 ಗೆಜೆಟೆಡ್​ ಪ್ರೊಬೇಷನರ್​ ಹುದ್ದೆಗಳಿಗೆ ಭಾನುವಾರ ಪೂರ್ವಭಾವಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಕೆಪಿಎಸ್​ಸಿಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕುವ ಉದ್ದೇಶದಿಂದ ಪೂರ್ವಭಾವಿ ಪರೀಕ್ಷೆಯನ್ನು ಜಿಲ್ಲಾಧಿಕಾರಿ ಮುಂದಾಳತ್ವದಲ್ಲಿ ಚುನಾವಣೆ ಮಾದರಿ ಕಟ್ಟುನಿಟ್ಟಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ.

319 ಹುದ್ದೆಗಳ ಪೈಕಿ 202 ಗ್ರೂಪ್​ ಬಿ ಹಾಗೂ 117 ಗ್ರೂಪ್​ ಎ ಹುದ್ದೆಗಳಾಗಿವೆ. ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳ 345 ಪರೀಕ್ಷಾ ಉಪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಬೆಳಗ್ಗೆ 10 ರಿಂದ 12 ರವರೆಗೆ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 1,47,067 ಅಭ್ಯರ್ಥಿಗಳು (91,238 ಪುರುಷರು ಮತ್ತು 53,074 ಮಹಿಳೆಯರು) ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ 2 ಪತ್ರಿಕೆಗಳು ಸೇರಿ 2,94,134 ಒಎಂಆರ್​ ಹಾಳೆಗಳನ್ನು ಸ್ಕ್ಯಾನ್​ ಮಾಡಿಕೊಳ್ಳಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಕಟ್ಟುನಿಟ್ಟಿನ ಸೂಚನೆ

• ಐದು ಆಯ್ಕೆಗಳ ಒಎಂಆರ್​ ಪದ್ಧತಿಯಲ್ಲಿ ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು ಗುರುತು ಮಾಡಬೇಕು. ಉತ್ತರ ಖಾಲಿ ಬಿಡುವಂತಿಲ್ಲ.

• ತ್ರಿಪ್ರತಿ ಒಎಂಆರ್​ ಹಾಳೆಯಲ್ಲಿ ಒಂದು ಅಭ್ಯರ್ಥಿಗೆ, 1 ಕೆಪಿಎಸ್​ಸಿ ಮೌಲ್ಯಮಾಪನಕ್ಕೆ ಮತ್ತು 3ನೆಯದು ಸ್ಟ್ರಾಂಗ್​ ರೂಮ್​ನಲ್ಲಿ ಸುರಕ್ಷಿತವಾಗಿಡಬೇಕು.

• ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಮತ್ತು ಮೊಬೈಲ್​ ಜಾಮರ್​ ಅಳವಡಿಕೆ.

• ಪರೀಕ್ಷೆ ನಡೆದ ದಿನದಂದೇ ಸ್ಕ್ಯಾನ್​ ಮಾಡಿದ ಒಎಂಆರ್​ ಪ್ರತಿಗಳನ್ನು ಕೆಪಿಎಸ್​ಸಿ ವೆಬ್​ಸೈಟ್​ನಲ್ಲಿ ವೀಕ್ಷಣೆಗೆ ಅವಕಾಶ.

ಪಾರದರ್ಶಕವಾಗಿ, ಅಕ್ರಮ ರಹಿತ ಪರೀಕ್ಷೆ ನಡೆಸಲು ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಿದ್ದು, ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದೆ. ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶವಿಲ್ಲ. ಅನುಮತಿ ಇರುವ ವ್ಯಕ್ತಿಯು ಭದ್ರತಾ ತಪಾಸಣೆಗೆ ಒಳಪಡಬೇಕು. ಭದ್ರತೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿದ್ದು, ಯಾವುದೇ ಲೋಪ ಮತ್ತು ಗೊಂದಲ ಆಗದಂತೆ ಕೆಪಿಎಸ್​ಸಿ ಕಟ್ಟುನಿಟ್ಟಿನ ಕ್ರಮ ವಹಿಸಿಕೊಂಡಿದೆ. ಮೊದಲ ಬಾರಿಗೆ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನೇಮಕ ಮಾಡಿದ್ದು, ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಸಿಬ್ಬಂದಿ ಆಗಿರಬೇಕು. ನಕಲಿ ಅಭ್ಯರ್ಥಿಗಳ ಭಾಗವಹಿಸುವಿಕೆ ತಡೆಯಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.