ರಾಜ್ಯ

ಕೆಪಿಎಸ್​​ಸಿ ಅಕ್ರಮ ಕೊನೆಗೂ ಒಪ್ಪಿಕೊಂಡ ಜ್ಞಾನೇಂದ್ರ!... ಸಂಬಂಧಿಕರ ಖಾತೆಯಲ್ಲಿ ವಹಿವಾಟು: 1.30 ಕೋಟಿ ರೂಪಾಯಿ ನಗದು ನೀಡಿದ್ನಂತೆ ಕನ್ನಾಳೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಬಂಧಿತ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಗಂಗ್ವಾರ್, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ. ಹಗರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹ ಮತ್ತು ಹಣದ ವಹಿವಾಟಿನ ಪತ್ತೆಗೆ ಮುಂದಾಗಿದ್ದ ಇ.ಡಿ ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳು ಲಭಿಸಿವೆ.

ಪಶುವೈದ್ಯಾಧಿಕಾರಿಗಳ 400 ಹುದ್ದೆಗಳ ನೇಮಕಾತಿ ವೇಳೆ ಪರೀಕ್ಷೆಯ ಅಂತಿಮ ಕರಡು ಸಿದ್ಧಪಡಿಸುವ ಹಂತದಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ಕಾಪಿ ಮಾಡಿದ್ದಾಗಿ ಗಂಗ್ವಾರ್ ಬಾಯಿಬಿಟ್ಟಿದ್ದಾನೆ. ಆಯ್ದ ಅಭ್ಯರ್ಥಿಗಳಿಗೆ ಉತ್ತರಗಳ ಸಹಿತ ಪ್ರಶ್ನೆ ಪತ್ರಿಕೆ ಒದಗಿಸಿ, ಸರ್ಕಾರಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡಿರುವುದಾಗಿ ಜ್ಞಾನೇಂದ್ರ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಕೋಟಿ ಕೋಟಿ ಲಂಚ ಪಡೆದಿರುವುದು ದೃಢಪಟ್ಟಿದೆ. ಇ.ಡಿ ಅಧಿಕಾರಿಗಳು ಆರೋಪಿ ಜ್ಞಾನೇಂದ್ರನನ್ನು ಸೆ.26ರಿಂದ ಅ.3ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ಅಭ್ಯರ್ಥಿಗಳಿಂದ ಪಡೆದಿದ್ದ ಲಂಚದ ಹಣವನ್ನು ಜ್ಞಾನೇಂದ್ರ ಕುಮಾರ್, ತನ್ನ ಅತ್ತಿಗೆ ಖಾತೆಗೆ 15.39 ಲಕ್ಷ ರೂ., ಸಹೋದರನ ಖಾತೆಗೆ 10.94 ಲಕ್ಷ ರೂ. ವರ್ಗಾವಣೆ ಮಾಡಿರುವುದನ್ನು ಇ.ಡಿ ಪತ್ತೆ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಧಾನ, ಅಭ್ಯರ್ಥಿಗಳಿಗೆ ಹಣದ ಬೇಡಿಕೆ ಇಟ್ಟಿರುವುದು, ಮಧ್ಯವರ್ತಿಗಳ ಪಾತ್ರ, ಹಣದ ವರ್ಗಾವಣೆ ಮತ್ತು ಆ ಹಣದಿಂದ ಆಸ್ತಿ ಹಾಗೂ ಚಿನ್ನಾಭರಣ ಖರೀದಿಸಿರುವ ಆರೋಪಗಳ ಕುರಿತು ಹಲವು ಮಾಹಿತಿಗಳು ಲಭಿಸಿವೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಮುಂಗಡ ಲಂಚ ಸಂಗ್ರಹ?

ಅಭ್ಯರ್ಥಿಗಳಿಂದ ಮುಂಗಡವಾಗಿ ಕನ್ನಾಳೆ 1.50 ಕೋಟಿ ಲಂಚ ಸಂಗ್ರಹಿಸಿದ್ದು, ಈ ಪೈಕಿ 80 ಲಕ್ಷ ರೂ. ಅನ್ನು ಬೀದರ್ ಜಿಲ್ಲೆ ಭಾಲ್ಕಿಯ 'ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ನಿಯಮಿತ' ಸಂಸ್ಥೆಯ ಬ್ಯಾಂಕ್ ಖಾತೆಯ ಮೂಲಕ ಸ್ವೀಕರಿಸಲಾಗಿದ್ದು, ಉಳಿದ ಮೊತ್ತವನ್ನು ನಗದು ರೂಪದಲ್ಲಿ ಪಡೆಯಲಾಗಿತ್ತು. ಆ ಹಣದಲ್ಲಿ 1.30 ಕೋಟಿ ನಗದು ಹಣವನ್ನು ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ಗೆ ನೀಡಿರುವುದಾಗಿ ಮಧ್ಯವರ್ತಿ ಕನ್ನಾಳೆ ಇಡಿ ಮುಂದೆ ಬಾಯಿಬಿಟ್ಟಿದ್ದಾನೆ. ಆದರೆ, ಗಂಗ್ವಾರ್ ಆ ಹಣದಿಂದ ಸಹೋದರನ ಹೆಸರಿನಲ್ಲಿ ವಿಲ್ಲಾ ಖರೀದಿ ಮಾಡಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.

ಚಿನ್ನಾಭರಣ ಖರೀದಿ

ಬಸವರಾಜ್ ಕನ್ನಾಳೆಗೆ ಗೆಳತಿ 'ಯಾಶಿ ಜೈಸ್ವಾಲ್'ಗಾಗಿ ಸುಮಾರು 23 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸುವಂತೆ ಜ್ಞಾನೇಂದ್ರ ಸೂಚಿಸಿರುವುದಾಗಿ ಇಡಿ ಮುಂದೆ ಹೇಳಿದ್ದಾನೆ. ಈ ಹಣವನ್ನು ಜುವೆಲ್ಲರಿ ಅಂಗಡಿಗೆ ಸೌಹಾರ್ದ ಸಹಕಾರಿ ಬ್ಯಾಂಕ್ ಮೂಲಕ ಪಾವತಿ ಮಾಡಿರುವುದು ದೃಢಪಟ್ಟಿದೆ.

ಟ್ಯಾಬ್ ನಾಶ..?

ಪ್ರಶ್ನೆಪತ್ರಿಕೆ ಫೋಟೋವನ್ನು ಕಚೇರಿಯಲ್ಲಿದ್ದ ಟ್ಯಾಬ್‌ನಲ್ಲಿ ಕಾಪಿ ಮಾಡಿಕೊಂಡಿದ್ದ ಜ್ಞಾನೇಂದ್ರ ಸಾಕ್ಷ್ಯ ನಾಶಪಡಿಸಲು ಆ ಟ್ಯಾಬ್ ಒಡೆದು ಹಾಕಿದ್ದಾನೆ. ಒಡೆದು ಹೋಗಿರುವ ಟ್ಯಾಬ್ ಇ.ಡಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಖರೀದಿ ವಿವರಗಳು, ಐಎಂಇಐ ಮತ್ತು ಅದರ ಸರಣಿ ಸಂಖ್ಯೆಗೆ ಅನುಗುಣವಾಗಿ ಟ್ಯಾಬ್ ಪತ್ತೆಗೆ ಇ.ಡಿ ಮುಂದಾಗಿದೆ.

ಪೆನ್‌ಡ್ರೈವ್ ಬಳಕೆ

ಪ್ರಶ್ನೆಪತ್ರಿಕೆಯನ್ನು 2026ರ ಜನವರಿ 7 ರಂದು 'ಎಚ್‌ಪಿ' ಕಂಪನಿ ಪೆನ್‌ಡ್ರೈವ್‌ನಲ್ಲಿ ಕಾಪಿ ಮಾಡಿಕೊಂಡು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ್ ಕನ್ನಾಳೆಗೆ ನೀಡಿರುವುದಾಗಿ ಗಂಗ್ವಾರ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಇಡಿ ಅಧಿಕಾರಿಗಳು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಎರಡೂ ಪತ್ರಿಕೆಗಳಲ್ಲಿನ ಸುಮಾರು 70 ರಿಂದ 80 ಪ್ರಶ್ನೆಗಳಿಗೆ ಉತ್ತರಗಳ ಸಹಿತ ಮಾಹಿತಿ ಸೋರಿಕೆ ಮಾಡಿರುವುದು ಗಂಗ್ವಾರ್ ಮೇಲಿದೆ. ಪರೀಕ್ಷೆ ನಡೆದ ಜನವರಿ 9ರ ದಿನಾಂಕಕ್ಕೂ ಮುನ್ನ, ಜನವರಿ 8ರಂದು ಬೆಂಗಳೂರು ಸಮೀಪದ ಸಿಂಗಹಳ್ಳಿ ಪ್ರದೇಶದಲ್ಲಿರುವ ಆರ್ಕಿಡ್ ನಿರ್ವಾಣ ಸೊಸೈಟಿಯ ವಿಲ್ಲಾಕ್ಕೆ ಸುಮಾರು 20 ಅಭ್ಯರ್ಥಿಗಳನ್ನು ಕರೆದುಕೊಂಡು ಬಂದು ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಬಸವರಾಜ್ ಕನ್ನಾಳೆ ಅಭ್ಯರ್ಥಿಗಳು ಉಳಿದುಕೊಳ್ಳಲು ಹಲವು ವಿಲ್ಲಾಗಳನ್ನು ಕಾಯ್ದಿರಿಸಿದ್ದರು ಎಂಬ ಮಾಹಿತಿಯನ್ನು ಇಡಿ ಸಂಗ್ರಹಿಸಿದೆ.