ಶಿವಶಂಕರಪ್ಪ ಸಾಹುಕಾರ್​, ಗೀತಾ  
ರಾಜ್ಯ

ಕೆಪಿಎಸ್​ಸಿ ಕೀ ಉತ್ತರ 50 ಲಕ್ಷಕ್ಕೆ ಸೇಲ್​

ಸಾಹುಕಾರ್, ಗೀತಾ ಕರ್ಮಕಾಂಡ ಮತ್ತುಷ್ಟು ಬಯಲು ಮಾಡಿದ ಇ.ಡಿ, ಬಡವರ ಮಕ್ಕಳು ಎನ್ನದೇ ಕೋಟಿ ಕೋಟಿ ಲೂಟಿ, 1:3 ಮೆರಿಟ್ ಪಟ್ಟಿಯಲ್ಲೂ ಲಕ್ಷ ಲಕ್ಷ ಪೀಕಿದ್ದ ಸಾಹುಕಾರ್ , ಹಲವು ನೇಮಕಾತಿಯಲ್ಲೂ ಜ್ಞಾನೇಂದ್ರನಿಂದ ಅಕ್ರಮ

ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ವೇಳೆ ಬೆಳಕಿಗೆ ಬಂದ ಹಗರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ ಅವರ ಕರ್ಮಾಕಾಂಡವನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಇನ್ನಷ್ಟು ಬಯಲು ಮಾಡಿದ್ದಾರೆ.

ಸಿಐಡಿಅಧಿಕಾರಿಗಳ ಮುಂದೆ ನಾನು ಯಾವುದೇ ತಪ್ಪು ಮಾಡಿಲ್ಲ, ಆಯೋಗದ ಘನತೆ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಹೇಳುತ್ತಿದ್ದ ಸಾಹುಕಾರ್, ಬಡವರ ಮಕ್ಕಳು ಎನ್ನದೇ 20 ರಿಂದ 50 ಲಕ್ಷ ರೂ.ವರೆಗೆ ಲಂಚ ಪಡೆದಿದ್ದಾರೆ. ಪರೀಕ್ಷೆಗೂ ಮುನ್ನವೇ ಕೀ ಉತ್ತರ ಮಾರಾಟ ದಂಧೆ ಮಾಡಿಕೊಂಡಿದ್ದ ಸಾಹುಕಾರ್ ಮತ್ತು ಗೀತಾ 1:3 ಮೆರಿಟ್ ಪಟ್ಟಿಯಲ್ಲೂ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕೋಟಿ ಕೋಟಿ ಲಂಚ ವಸೂಲಿ ಮಾಡಿರುವುದನ್ನು ಇ.ಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.

ವ್ಯವಸ್ಥಿತ ಸಂಚು ರೂಪಿಸಿ ಭ್ರಷ್ಟಾಚಾರ:

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್) ಅಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಇದುವರೆಗೆ ಲಭ್ಯವಾಗಿರುವ ಸಾಕ್ಷ್ಯಗಳ ಪ್ರಕಾರ, ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯನ್ನೇ ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಂಡು ಅಭ್ಯರ್ಥಿಗಳಿಂದ ಲಂಚದ ಹಣ ಸಂಗ್ರಹಿಸುವ ಜಾಲವೊಂದು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

20ರಿಂದ 40 ಲಕ್ಷಕ್ಕೆ ಉತ್ತರ ಕೀ ಮಾರಾಟ:

2026ರ ಜನವರಿ 9ರಂದು ನಡೆದ ಪಶುವೈದ್ಯಾಧಿಕಾರಿ 400 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಒಂದು ದಿನ ಮುನ್ನ, ಅಂದರೆ ಜನವರಿ 8ರಂದು ಕೆಲವು ಅಭ್ಯರ್ಥಿಗಳಿಗೆ 80 ಪ್ರಶ್ನೆಗಳಿಗೆ ಸಂಬಂಧಿಸಿದ ಸರಿಯಾದ ಉತ್ತರಗಳನ್ನು ಒದಗಿಸಲಾಗಿತ್ತು . ಕೀ ಉತ್ತರ ನೀಡಲು ಅಭ್ಯರ್ಥಿಗಳಿಂದ 20 ಲಕ್ಷದಿಂದ 40 ಲಕ್ಷದವರೆಗೆ ಲಂಚ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಜ್ಞಾನೇಂದ್ರನಿಂದ ಕೀ ಉತ್ತರ ಸೋರಿಕೆ:

ಸಾಹುಕಾರ್ ಆಪ್ತೆ ಹಾಗೂ ಸದಸ್ಯೆ ಬಿ.ವಿ.ಗೀತಾ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಕೀ ಉತ್ತರಗಳು ಸೋರಿಯಾಗಿದೆ. 80 ಪ್ರಶ್ನೆಗಳ ಕೀ ಉತ್ತರಗಳನ್ನು ಗಂಗ್ವಾರನನ್ನು ಸಂಪರ್ಕಿಸಿದ್ದ ಗೀತಾ ಪಡೆದುಕೊಂಡಿದ್ದರು. ಅಲ್ಲದೇ ಗೀತಾ ಸೂಚನೆಯಂತೆ ಅಭ್ಯರ್ಥಿಗಳ ಆಸನ ವ್ಯವಸ್ಥೆ ಹಾಗೂ ಹಾಲ್ ಟಿಕೇಟ್ ನೋಂದಣಿ ಸಂಖ್ಯೆಯಂತೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀಗಳನ್ನು ಹಂಚಿಕೆ ಮಾಡಿದ್ದರು.

ಪರೀಕ್ಷೆಗೂ ಮುನ್ನ ಕೀ ಉತ್ತರಗಳನ್ನು ಪಡೆದುಕೊಂಡಿದ್ದ ಆರೋಪಿ ಗೀತಾ ಒಬ್ಬ ಅಭ್ಯರ್ಥಿಯಿಂದ 40 ಲಕ್ಷದ ಒಪ್ಪಂದದ ಪೈಕಿ ಮುಂಗಡವಾಗಿ 20 ಲಕ್ಷದವರೆಗೆ ಹಣ ಪಡೆದುಕೊಂಡಿದ್ದರು. ಅದೇ ರೀತಿ ಶಿವಶಂಕರಪ್ಪ ಸಾಹುಕಾರ್ ಕೂಡ ಅದೇ ಕೀ ಉತ್ತರಗಳನ್ನು ತನಗೆ ಬೇಕಾದ ಒಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ.ಗೆ ಡೀಲ್ ಮುಗಿಸಿಕೊಂಡು ಮುಂಗಡವಾಗಿ ಮೊದಲ ಹಂತದಲ್ಲಿ 10 ಲಕ್ಷ ರೂ. ಪಡೆದಿದ್ದರು ಎಂದು ಇಡಿ ತಿಳಿಸಿದೆ.

ಮುಂಗಡ ಹಣ ಪಡೆದಿದ್ದ ಅಭ್ಯರ್ಥಿಗಳ ಗುರುತು

ಅಕ್ರಮ ಮಾರ್ಗದಲ್ಲ ಅಭ್ಯರ್ಥಿಗಳನ್ನು ಸರ್ಕಾರಿ ಹುದ್ದೆಗೆ ಆಯ್ಕೆ ಮಾಡಲು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆರು ಅಭ್ಯರ್ಥಿಗಳನ್ನು ಇಡಿ ಗುರುತಿಸಿದೆ. ಅದೇ ರೀತಿ ಆಯ್ಕೆಗೊಂಡ ಇತರೆ ಅಭ್ಯರ್ಥಿಗಳ ಕುರಿತು ತನಿಖೆ ಮುಂದುವರೆಸಿರುವ ತನಿಖಾಧಿಕಾರಿಗಳು, 10 ಅಭ್ಯರ್ಥಿಗಳನ್ನು ರೆಸಾರ್ಟ್, ಬೆಂಗಳೂರು ಹೊರ ವಲಯದ ವಿಲ್ಲಾದಲ್ಲಿ ಕರೆದುಕೊಂಡು ಹೋಗಿ ತರಬೇತಿ ಪಡೆದಿರುವವರ ಪತ್ತೆಗೆ ಬಲೆ ಬಿಸಿದೆ.

80 ಲಕ್ಷ ರೂ.ಮೌಲ್ಯದ ಖಾಲಿ ಚೆಕ್

ಪಶುವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿಕೊಡಲು ಒಬ್ಬ ಅಭ್ಯರ್ಥಿಯಿಂದ 80 ಲಕ್ಷ ಮೌಲ್ಯದ ಖಾಲಿ ಚೆಕ್‌ಗಳನ್ನು ಪಡೆದಿದ್ದ ಸಾಹುಕಾರ್ ಮತ್ತು ಗೀತಾ ಅವರ ನಿವಾಸದಲ್ಲಿ ಪ್ರಾಮಿಸರಿ ನೋಟ್‌ಗಳು ಪತ್ತೆಯಾಗಿವೆ. ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಆಪ್ತ ಸಹಚರ ಬಸವರಾಜ್ ಕನ್ನಾಲೆ ಮೂಲಕ ಈ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿಸಿದ್ದ. ಅಭ್ಯರ್ಥಿಗಳಿಂದ 40ರಿಂದ 50 ಲಕ್ಷದವರೆಗೆ ಲಂಚ ಪಡೆದಿರುವುದು ಇಡಿ ತನಿಖೆ ವೇಳೆ ತಿಳಿದಿದೆ.

ಹಲವು ನೇಮಕಾತಿಯಲ್ಲೂ ಅಕ್ರಮ ದಂಧೆ:

ಸಾಹುಕಾರ್, ಗೀತಾ, ಜ್ಞಾನೇಂದ್ರ ಹಾಗೂ ಕನ್ನಾಳೆ, ಈ ನಾಲ್ವರು ಆರೋಪಿಗಳು ಪಶುವೈದ್ಯಾಧಿಕಾರಿ ಪರೀಕ್ಷೆಯಷ್ಟೇ ಅಲ್ಲದೆ, ವಿವಿಧ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿಯೂ ಅಕ್ರಮ ಎಸಗಿದ್ದಾರೆ. ಗೌಪ್ಯ ಹಾಗೂ 1:3 ಮೆರಿಟ್ ಪಟ್ಟಿ ಬಿಡುಗಡೆ ವೇಳೆ ಆಯೋಗದ ನಿಯಮ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಸಾಮಾನ್ಯವಾಗಿ 1:3 ಅರ್ಹತಾ ಪಟ್ಟಿ ಪ್ರಕಟಿಸುವಾಗ ಅಭ್ಯರ್ಥಿಗಳ ವೈಯಕ್ತಿಕ ಅಂಕಗಳನ್ನು ಕೆಪಿಎಸ್‌ಸಿ ಬಹಿರಂಗಪಡಿಸುವುದಿಲ್ಲ. ಆದರೆ ಕೆಪಿಎಸ್‌ಸಿ ಸದಸ್ಯರು ಮತ್ತು ಅಧಿಕಾರಿಗಳು ಪರೀಕ್ಷಾ ನಿಯಂತ್ರಕರ ಕಚೇರಿಯಲ್ಲಿದ್ದ ಗೌಪ್ಯವಾಗಿ ಇಡಬೇಕಾಗಿದ್ದ ಮೆರಿಟ್ ಮಾಹಿತಿ ಪಡೆದುಕೊಂಡು ಯಾವ ಅಭ್ಯರ್ಥಿಗೆ ಅಂತಿಮ ಆಯ್ಕೆ ಮಾಡಬೇಕು ಎಂಬುದನ್ನು ಚರ್ಚಿಸಿ ಆಯ್ಕೆ ಮಾಡುತ್ತಿದ್ದರು. ನಂತರ ಅಂತಹ ಅಭ್ಯರ್ಥಿಗಳನ್ನು ಸಂಪರ್ಕಿಸಿ, ‘ನಿಮ್ಮ ಆಯ್ಕೆ ಖಚಿತ’ ಎಂದು ಭರವಸೆ ನೀಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹೀಗೆ ಕೆಪಿಎಸ್‌ಸಿಯಲ್ಲಿದ್ದ ಗೌಪ್ಯ ಮೆರಿಟ್ ಮಾಹಿತಿಯನ್ನೇ ಅಕ್ರಮವಾಗಿ ಬಳಸಿಕೊಂಡು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ನೇಮಕಾತಿ ಹಗರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಧಿಕಾರಿಗಳು, ಸದಸ್ಯರು, ಮಧ್ಯವರ್ತಿಗಳು ಹಾಗೂ ಲಂಚ ನೀಡಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಾತ್ರ ಬಯಲಾಗುವ ಸಾಧ್ಯತೆ ಇದೆ ಎಂದು ಇಡಿ ತಿಳಿಸಿದೆ.

ಸಿಐಡಿಯಿಂದಲೂ ತನಿಖೆ ಚುರುಕು

ಕೆಪಿಎಸ್ಸಿ ಅಕ್ರಮದ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ತಪ್ಪೊಪ್ಪಿಕೊಂಡ 7 ಅಭ್ಯರ್ಥಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಗುರುವಾರ ಹಾಜರು ಪಡೆಸಿದ್ದಾರೆ. ಪಶುವೈದ್ಯಾಧಿಕಾರಿ ಹುದ್ದೆಯಲ್ಲಿ ಆಯ್ಕೆಯಾಗುವ ಕುರಿತು ಮಧ್ಯವರ್ತಿಗಳ ಮೂಲಕ ಲಂಚ ನೀಡಿರುವ ಬಗ್ಗೆ ರಾಜಾ ಅಹ್ಮದ್, ಸಿದ್ಧಾರ್ಥ, ಬಸವರಾಜ್, ಸುಹೇಲ್ ಸೇರಿ ಏಳು ಜನ ಅಭ್ಯರ್ಥಿಗಳು ನ್ಯಾಯಾಲಯದ ಮುಂದೆ ಸೆಕ್ಷನ್ 183ರ ಅಡಿ ಹೇಳಿಕೆ ನೀಡಿದ್ದಾರೆ. ಅಭ್ಯರ್ಥಿಗಳ ನೀಡಿರುವ ಮಾಹಿತಿ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.