KPSC  
ರಾಜ್ಯ

ಕೆಪಿಎಸ್‌ಸಿ ₹1,000 ಕೋಟಿ ಅಕ್ರಮ?

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • ಗೆಜೆಟೆಡ್ ಪ್ರೊಬೇಷನರಿ ಹುದ್ದೆಯಲ್ಲಿ ಭ್ರಷ್ಟಾಚಾರ
  • 3 ತಿಂಗಳಿಂದ ತನಿಖೆ ಇಬ್ಬರು ಮಾತ್ರ ಬಂಧನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಿಂದ ನಡೆಸಲಾಗಿರುವ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ₹ 1,000 ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಅಡಿ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿದೆ.
ಸೆ.11ರಂದು ಬೆಂಗಳೂರಿನ ಇ.ಡಿ ವಲಯ ಕಚೇರಿಗೆ ಪ್ರಭಾವಿ ವ್ಯಕ್ತಿಯೋರ್ವನಿಂದ ದೂರು ಸಲ್ಲಿಕೆಯಾಗಿದ್ದು, ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ಇಸಿಐಆರ್) ದಾಖಲಿಸಿ ತನಿಖೆ ಆರಂಭಿಸುವಂತೆ ಮನವಿ ಮಾಡಲಾಗಿದೆ. ಅಭ್ಯರ್ಥಿಗಳಿಂದ ಲಕ್ಷ್, ಲಕ್ಷ್ ಲಂಚ, ಪರೀಕ್ಷಾ ಅಕ್ರಮ, ಅಧಿಕಾರ ದುರುಪಯೋಗ, ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ, ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಮಾರ್ಪಾಡು ಹಾಗೂ ಸರ್ಕಾರಿ ಹುದ್ದೆಗಳ ಮಾರಾಟದ ಮೂಲಕ ಅಕ್ರಮವಾಗಿ ಸಂಪಾದಿಸಲಾಗಿದೆ ಎನ್ನಲಾದ ಹಣದ ಮೂಲ ಪತ್ತೆ ಹಚ್ಚಿ, ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗೆಜೆಟೆಡ್ ಪ್ರೊಬೇಷನರಿ
ಪರೀಕ್ಷೆಯಲ್ಲೂ ಅಕ್ರಮ:

ಕಳೆದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆ ಸೇರಿ ಐದು ವರ್ಷದಲ್ಲಿ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಮಾಜಿ ಹಾಲಿ ಅಧ್ಯಕ್ಷರು, ಮಧ್ಯವರ್ತಿಗಳು, ಕೆಪಿಎಸ್‌ಸಿ ಸಿಬ್ಬಂದಿ, ಚಾಲಕರು, ಕೋಚಿಂಗ್ ಸಂಸ್ಥೆಗಳು ಸೇರಿ ಕೆಪಿಎಸ್‌ಸಿ ಹೆಸರನ್ನು ದುರುಪಯೋಗ ಪಡೆಸಿಕೊಂಡಿರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಸಿಸ್ಟೆಂಟ್ ಕಮಿಷನರ್, ತಹಶೀಲ್ದಾರ್, ಡಿವೈಎಸ್‌ಪಿಗಳಂತಹ ಪ್ರಮುಖ ಹುದ್ದೆಗಳನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ.
384 ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಗಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. 2024ರ ಫೆಬ್ರವರಿ ಮತ್ತು 2025ರ ಫೆಬ್ರವರಿ ಅವಧಿಯಲ್ಲಿ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು 384 ಹುದ್ದೆಗಳ ಪೈಕಿ 310 ಹುದ್ದೆಗಳು ರೆಸಿಡ್ಯುಯಲ್ ಪೇರೆಂಟ್ ಕೇಡರ್ (ಆರ್‌ಪಿಸಿ) ಹಾಗೂ 74 ಹುದ್ದೆಗಳು ಕಲ್ಯಾಣ ಕರ್ನಾಟಕ ಕೇಡರ್‌ಗೆ ಸೇರಿದ್ದ ಖಾಲಿ ಹುದ್ದೆಗಳನ್ನು ಆಯೋಗದ ಪ್ರಮುಖ ಹುದ್ದೆಯಲ್ಲಿದ್ದವರು ಮಾರಾಟ ಮಾಡಿಕೊಂಡು ನೇಮಕಾತಿ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ.
1:3 ಅನುಪಾತದಲ್ಲೂ ಭಾರಿ ವ್ಯತ್ಯಾಸ?
ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ವ್ಯಕ್ತಿತ್ವ ಪರೀಕ್ಷೆಗೆ 1:3 ಅನುಪಾತದಲ್ಲಿ 1,152 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ 1,158 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಿ, ಹೆಚ್ಚುವರಿ ಆರು ಅಭ್ಯರ್ಥಿಗಳಿಂದ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂಬ ಆರೋಪದ ಮೇರೆಗೆ ಇಡಿ ತನಿಖೆ ಕೈಗೊಂಡಿದೆ.
400 ಪಶುವೈದ್ಯಾಧಿಕಾರಿ ಹುದ್ದೆ:
ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಿಂದ ಆಯೋಗದ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆರಂಭವಾಗಿರುವ ಹಗರಣ ಆಯೋಗದ ಅಧ್ಯಕ್ಷರೊಬ್ಬರನ್ನು ಎರಡೇರಡು ಬಾರಿ ಅಮಾನತುಗೊಳಿಸಲಾಗಿದೆ. ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸಿಐಡಿಯ ವಿಶೇಷ ತನಿಖಾ ತಂಡ (ಖಐ) ಬಂಧಿಸಿ ಜೈಲಿಗೆ ಕಳುಹಿಸಿರುವುದು ತನಿಖೆ ಚುರುಕಗೊಂಡಿದೆ.
ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿನ ಚಿನ್ನಾಭರಣ ಮಳಿಗೆಯಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಅಯೋಧ್ಯೆ ಮೂಲದ ಯುವತಿಗೆ 26 ಲಕ್ಷ ಮೌಲ್ಯದ ಆಭರಣ ಖರೀದಿಸಿರುವ ಐಎಎಸ್ ಅಧಿಕಾರಿಯ ಕರ್ಮಕಾಂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಭರಣ ಖರೀದಿಯ ಬಿಲ್ ಹಾಗೂ ಮಳಿಗೆಯ ಸಿಸಿ ಕ್ಯಾಮರಾ ದೃಶ್ಯಗಳನ್ನು ತನಿಖಾಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೂ ನೇಮಕಾತಿ ಅಕ್ರಮದಲ್ಲಿ ತಾನು ಭಾಗಿಯಾಗಿಲ್ಲ ಎಂದು ಆರೋಪಿ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕೋಟ್ಯಂತರ ರೂ.ಮೌಲ್ಯದ ವಿಲ್ಲಾ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ವಿಲ್ಲಾವೊಂದನ್ನೂ ತನಿಖಾಧಿಕಾರಿಗಳು ಪತ್ತೆ ಮಾಡಿ ಪರಿಶೀಲಿಸಿದ್ದಾರೆ. ಈ ಆಸ್ತಿ ಜ್ಞಾನೇಂದ್ರ ಗಂಗ್ವಾರ್ ಅವರ ಸಹೋದರ ಕಮಲಾಪತಿ ಹೆಸರಿನಲ್ಲಿ ಖರೀದಿಸಲಾಗಿದೆ ಎನ್ನಲಾಗಿದ್ದು, ಆಸ್ತಿ ದಾಖಲೆಗಳು ಹಾಗೂ ಖರೀದಿಗೆ ಬಳಸಲಾದ ಹಣದ ಮೂಲ ತನಖೆ ವೇಳೆ ಬಯಲಾಗಿದೆ.
3 ತಿಂಗಳಿಂದ ತನಿಖೆ ಕೇವಲ ಇಬ್ಬರ ಬಂಧನ!
ಲೋಕಸೇವಾ ಆಯೋಗದಲ್ಲಿ ನಡೆದಿರುವ ಸಾಲು ಸಾಲು ಹಗರಣಗಳ ಕುರಿತು ಕಳೆದ ಮೂರು ತಿಂಗಳಿಂದ ತನಿಖೆ ನಡೆಯುತ್ತಿದೆ. ಆದರೆ, ಇದುವರೆಗೆ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಕಿಂಗ್‌ಪಿನ್‌ಗಳು ರಾಜಕೀಯ ಪ್ರಭಾವ ಬಳಸಿಕೊಂಡು ತಲೆಮರೆಸಿಕೊಂಡಿದ್ದಾರೆ. ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೂನ್ 6 ರಂದು ಆಯೋಗದ ಕಾರ್ಯದರ್ಶಿ ವೀಣಾ ಎಂಬುವರು ದಾಖಲಿಸಿರುವ ಎ್ಐಆರ್, ಪೈಶುವೈದ್ಯಾಧಿಕಾರಿ ಮಂಜುನಾಥ್ ಎಂಬುವರು ಜುಲೈ 24 ರಂದು ದಾಖಲಿಸಿದ ಎ್ ಸೇರಿ ಒಟ್ಟು 4 ಪ್ರಕರಣಗಳ ತನಿಖೆಯಲ್ಲಿ ಸ್ಥಳೀಯ ಪೊಲೀಸರು ಕೈಗೊಂಡಿದ್ದರು.
ಆದರೆ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಒಬ್ಬರ ಬಂಧನವಾಗಿರಲಿಲ್ಲ. ಅಕ್ರಮದ ಜಾಲ ದೊಡ್ಡಮಟ್ಟದಲ್ಲಿ ವಿಸ್ತಾರಗೊಂಡಿರುವ ಕುರಿತು ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳಿಂದ ಆಕ್ರೋಶ, ಚರ್ಚೆಯಾಗುತ್ತಿದ್ದಂತೆ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ನಂತರ ಜಾರಿ ನಿರ್ದೇಶನಾಯ ಅಧಿಕಾರಿಗಳು ತನಿಖೆ ಆರಂಭಿಸಿದ್ದರೂ ಕೇವಲ ಇಬ್ಬರನ್ನು ಮಾತ್ರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೋಟಿ ಕೋಟಿ ನುಂಗಿರುವ ಆರೋಪಿಗಳು ತನಿಖಾಧಿಕಾರಿಗಳ ಕಣ್ಣುತಪ್ಪಿಸಿ ಹೊರಗೆ ಉಳಿದಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಒತ್ತಾಯ
ಕೆಪಿಎಸ್‌ಎಸಿಯಲ್ಲಿ ನಡೆದು ಬಂದಿರುವ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ಹಾಗೂ ಪ್ರಭಾವಿಗಳ ಹಸ್ತಕ್ಷೇಪವಿಲ್ಲದ ತನಿಖೆ ನಡೆಸಿದರೆ ಹತ್ತಾರು ತಿಮಿಂಗಲುಗಳು ಬಲೆಗೆ ಬಿಳಲಿದ್ದಾರೆ. ಪಶುವೈದ್ಯ ಅಧಿಕಾರಿಗಳ ನೇಮಕಾತಿಯಿಂದ ಬಯಲಿಗೆ ಬಂದಿರುವ ಹಗರಣ ಸಿಐಡಿ, ಇಡಿ ತನಿಖಾ ಸಂಸ್ಥೆಗಳಿಗೆ ತನಿಖೆ ನಡೆಸುತ್ತಿದೆ. ಆದರೆ, ಇದಕ್ಕೂ ಮುನ್ನ ಹಲವು ಬಾರಿ ಅನೇಕ ತನಿಖೆ, ದಾಳಿಗಳು ನಡೆದಿವೆಯಾದರೂ ಕೆಪಿಎಸ್‌ಸಿ ಸುಧಾರಣೆಯಾಗಿಲ್ಲ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುವುದು ಅಭ್ಯರ್ಥಿಗಳ ಒತ್ತಾಯವಾಗಿದೆ.