ರಾಜ್ಯ

178 ಶಾಲೆಗಳಿಗೆ ಕೆಪಿಎಸ್​ ಸ್ಪರ್ಶ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಿಸಿಎಸ್​ಆರ್​ ಯೋಜನೆಯಡಿ ಕಲ್ಯಾಣದ ಶಾಲೆಗಳ ಅಭಿವೃದ್ಧಿಗೆ ಯೋಜನೆ
  • ರಾಜ್ಯದಲ್ಲಿ 1000 ಸ್ಕೂಲ್​ಗಳು ಆಯ್ಕೆ
ಜಯತೀರ್ಥ ಪಾಟೀಲ್​ ಕಲಬುರಗಿ
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸಿಸಿಎಸ್​ಆರ್​ ಯೋಜನೆಗೆ ವೇಗ ಸಿಕ್ಕಿದೆ. ಸಾವಿರ ಶಾಲೆಗಳನ್ನು ಕೆಪಿಎಸ್​ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಕಲ್ಯಾಣ ಕರ್ನಾಟಕದ 178 ಶಾಲೆಗಳು ಆಯ್ಕೆಯಾಗಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಹೊಸ ಅವಕಾಶ ತೆರೆದಿದೆ.
ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 40 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮೂಲಸೌಲಭ್ಯ ಕಲ್ಪಿಸುವುದು, ಶಿಕ್ಷಕರ ನೇಮಕ, ಪಠ್ಯಕ್ರಮ ಸುಧಾರಣೆ, ತಂತ್ರಜ್ಞಾನ ಏಕೀಕರಣ ಮತ್ತು ವಿದ್ಯಾರ್ಥಿ ಕಲ್ಯಾಣ ಕಾರ್ಯಕ್ರಮಗಳನ್ನು ನಿರಂತರ ಮಾಡುತ್ತಿದೆ. ಈ ಮಧ್ಯೆಯೂ ಹಲವಾರು ಸವಾಲುಗಳು ಎದುರಾಗುತ್ತಿವೆ. ಅನೇಕ ಶಾಲೆಗಳಿಗೆ ಮೂಲಸೌಕರ್ಯ, ಆಧುನಿಕ ಪ್ರಯೋಗಾಲಯ, ಡಿಜಿಟಲ್​ ತರಗತಿ ಕೊಠಡಿ, ಸಾರಿಗೆ ಸೌಲಭ್ಯ, ಕೌಶಲ ಶಿಕ್ಷಣ ನೀಡುವ ಅಗತ್ಯವಿದೆ. ಹೀಗಾಗಿ ಕಾಪೋರ್ರೇಟ್​ ಸಾಮಾಜಿಕ ಹೊಣೆಗಾರಿಕೆ ಅಡಿ ಈ ಯೋಜನೆ ರೂಪಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಐದು ಜಿಲ್ಲೆಗಳ 178 ಶಾಲೆಗಳನ್ನು ಈ ಯೋಜನೆಯಡಿ ಸರ್ಕಾರ ಗುರುತಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ 15, ಕೊಪ್ಪಳ 8, ಕುಷ್ಟಗಿ 6, ಯಲಬುರ್ಗಾ 8. ರಾಯಚೂರು ಜಿಲ್ಲೆಯ ದೇವದುರ್ಗ 11, ಲಿಂಗಸುಗೂರು 20, ಮಾನ್ವಿ 12, ರಾಯಚೂರು 17, ಸಿಂಧನೂರು 8. ಯಾದಗಿರಿ ಜಿಲ್ಲೆಯ ಶಹಾಪುರ 3, ಸುರಪುರ 17, ಯಾದಗಿರಿ 8. ಬೀದರ್​ ಜಿಲ್ಲೆಯ ಔರಾದ್​ 3, ಬಸವಕಲ್ಯಾಣ 6, ಹುಮನಾಬಾದ್​ 1. ಕಲಬುರಗಿ ಜಿಲ್ಲೆಯ ಅಫಜಲಪುರ 5, ಆಳಂದ 6, ಚಿಂಚೋಳಿ 2, ಚಿತ್ತಾಪುರ 6, ಗುಲ್ಬರ್ಗ ಉತ್ತರ 2, ಗುಲ್ಬರ್ಗ ದಕ್ಷಿಣ 7, ಜೇವರ್ಗಿ 5, ಸೇಡಂ 2 ಸೇರಿ ಒಟ್ಟು 35 ಶಾಲೆಗಳು ಆಯ್ಕೆಯಾಗಿವೆ.
ಪೂರ್ವ ಪ್ರಾಥಮಿಕ ಹಂತದಿಂದ ದ್ವೀತಿಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ ವ್ಯವಸ್ಥೆ ಇದಾಗಿದೆ. ಆಧುನಿಕ ಸೌಲಭ್ಯ, ಗುಣಮಟ್ಟದ ಕಲಿಕೆ, ಡಿಜಿಟಲ್​ ಕಲಿಕೆ, ಕೌಶಲ ಅಭಿವೃದ್ಧಿ ಮತ್ತು ಸಮಗ್ರ ಶಿಕ್ಷಣ ಒದಗಿಸುತ್ತಿದೆ. ಈ ಶಾಲೆಗಳನ್ನು ರಾಜ್ಯವ್ಯಾಪಿ ಸ್ಥಾಪಿಸಿ ಅತ್ಯುತ್ತಮ ಸಂಸ್ಥೆಗಳೊಂದಿಗೆ ಹೋಲಿಕೆ ಮಾಡಬಹುದಾದ ಗುಣಮಟ್ಟದ ಶಿಕ್ಷಣ ನೀಡುವ ಉತಷ್ಟ ಕೇಂದ್ರಗಳಾಗಿ ಮಾಡುವುದು ಪ್ರಮುಖ ಉದ್ದೇಶ. ಇಲ್ಲಿ ಕೈಗೆಟಕುವ ದರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲಿದೆ.
ತ್ವರಿತ ಅನುಷ್ಠಾನ ಮತ್ತು ತಡೆರಹಿತ ಸಮನ್ವಯ ಖಚಿತಪಡಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಿಸಿಎಸ್​ಆರ್​ ಕೋಶಗಳನ್ನು ಸ್ಥಾಪಿಸಲಾಗಿದೆ. ಶಾಲೆ ಮತ್ತು ಸಿಎಸ್​ಆರ್​ ಪಾಲುದಾರರ ಮಧ್ಯೆ ಪಾಲುದಾರಿಕೆ ಸುಲಭ, ಸರಳಗೊಳಿಸುವುದು, ಯೋಜನೆ ಮತ್ತು ಅನುಮೋದನೆಗಳಲ್ಲಿ ನೆರವು, ಪ್ರಮಾಣಿತ ಒಪ್ಪಂದ ಕಾರ್ಯಗತಗೊಳಿಸುವುದು, ಅನುಷ್ಠಾನದ ಮೇಲ್ವಿಚಾರಣೆ, ಸಮಯೋಚಿತ ಪೂರ್ಣಗೊಳಿಸುವಿಕೆ, ಗುಣಮಟ್ಟದ ಫಲಿತಾಂಶ ಖಾತ್ರಿಪಡಿಸಿಕೊಳ್ಳುವುದು, ಪಾರದರ್ಶಕತೆ ಕಾಪಾಡಿಕೊಳ್ಳುವುದು ಕೋಶದ ಹೊಣೆಯಾಗಿದೆ
ಸಿಎಸ್​ಆರ್​ ಪಾಲುದಾರರ ಆಯ್ಕೆ
ಕಾಪೋರ್ರೇಟ್​, ಎನ್​ಜಿಒಗಳು ತಾವು ಒದಗಿಸಬಹುದಾದ ಸೌಲಭ್ಯದ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈಗಿರುವ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ಹೊಸ ಶಾಲೆ ನಿರ್ಮಾಣ, ಸ್ಮಾರ್ಟ್​ ಕ್ಲಾಸ್​ರೂಮ್​ ಮತ್ತು ಎಐ ಹೊಂದಿರುವ ಕಲಿಕಾ ಮೂಲಸೌಲಭ್ಯ ಒದಗಿಸುವುದು. ಪ್ರತಿಭಾವಂತ, ಅರ್ಹ ಶಿಕ್ಷಕರನ್ನು ಒದಗಿಸುವುದು, ಶಾಲಾ ಸಾರಿಗೆ ವ್ಯವಸ್ಥೆ, ಸ್ಟೀಂ ಲ್ಯಾಬ್​ ಸ್ಥಾಪನೆ, ಆಧುನಿಕ ಕಲಿಕಾ ಸೌಲಭ್ಯ ಒದಗಿಸುವುದು, ಕೆಪಿಎಸ್​ಗೆ ಕಾಪೋರ್ರೇಟ್​ ಕಾರ್ಪಸ್​ ನಿಧಿ ಒದಗಿಸುವುದು, ಕೌಶಲ ಶಿಕ್ಷಣ, ಉದ್ಯಮ ಪ್ರಮಾಣೀಕರಣ ಮತ್ತು ವೃತ್ತಿ ಸಿದ್ಧತಾ ಕಾರ್ಯಕ್ರಮಗಳಿಗೆ ನೆರವು ಒದಗಿಸಬಹುದು ಅಥವಾ ಇದರಲ್ಲಿ ಯಾವುದಾದರೂ ಒಂದಕ್ಕೂ ಸೌಲಭ್ಯ ಒಗದಿಸಲು ಕಂಪನಿಗಳು ಮುಂದೆ ಬರಬಹುದಾಗಿದೆ.
"

ಕಾಪೋರ್ರೇಟ್​ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್​) ಅಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ. ಕಾಪೋರ್ರೇಟ್​ ಕಂಪನಿ, ಕಾರ್ಖಾನೆ, ಎನ್​ಜಿಒ, ವಿವಿಧ ಸಂಸ್ಥೆಗಳು ಈ ಯೋಜನೆಯಡಿ ಸರ್ಕಾರದೊಂದಿಗೆ ಶಿಕ್ಷಣದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬಹುದಾಗಿದೆ. ಪ್ರಕ್ರಿಯೆ ಶುರುವಾಗಿದ್ದು, ವಿವಿಧ ಕಂಪನಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಕೆಲವರು ಮುಂದೆ ಬರುವ ವಿಶ್ವಾಸವಿದೆ.

— > ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ