ಕರ್ನಾಟಕ ಪಬ್ಲಿಕ್ ಶಾಲೆ 
ರಾಜ್ಯ

ಕೆಪಿಎಸ್ ಓಕೆ, ವಿಲೀನ ಏಕೆ?

ಎನ್.ಎಲ್. ಶಿವಮಾದು

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆಪಿಎಸ್‌ಗೆ ಸುತ್ತಲಿನ 7 ಶಾಲೆಗಳನ್ನು ವಿಲೀನಗೊಳಿಸುವಂತೆ ಸೂಚನೆ
  • ಈ ಕಾರಣದಿಂದ ರಾಜ್ಯದ ಶಾಲೆಗಳ ಬಗ್ಗೆ ಪಾಲಕ, ವಿದ್ಯಾರ್ಥಿಗಳಲ್ಲಿ ನಮ್ಮೂರಿನ ಶಾಲೆ ಏನಾಗಲಿದೆ ಎಂಬ ಗೊಂದಲ
  • ರಾಜ್ಯದಲ್ಲಿವೆ 50 ಮಕ್ಕಳಿಗಿಂತ ಕಡಿಮೆ ಇರುವ 25 ಸಾವಿರ ಶಾಲೆ
ಎನ್.ಎಲ್. ಶಿವಮಾದು
ಬೆಂಗಳೂರು:: ಸರ್ಕಾರಿ ಶಾಲೆಗಳ ದಾಖಲಾತಿ, ಮೂಲ ಸೌಕರ್ಯ ಹೆಚ್ಚಳ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಸಹಕಾರಿಯಾಗುತ್ತಿವೆ. ಆದರೆ. ಕೆಪಿಎಸ್ ಹೆಸರಿನಲ್ಲಿ ಸುತ್ತಲಿನ ಶಾಲೆಗಳು ಮುಚ್ಚಲಿವೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈಗಾಗಲೇ ಒಂದೇ ಒಂದು ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ. ಇದರ ಹೊರತಾಗಿಯೂ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆಪಿಎಸ್‌ಗೆ ಸುತ್ತಲಿನ 7 ಶಾಲೆಗಳನ್ನು ವಿಲೀನಗೊಳಿಸುವಂತೆ ಸೂಚನೆ ನೀಡಿದೆ. ಈ ಕಾರಣದಿಂದ ರಾಜ್ಯದ ಶಾಲೆಗಳ ಬಗ್ಗೆ ಪಾಲಕ, ವಿದ್ಯಾರ್ಥಿಗಳಲ್ಲಿ ನಮ್ಮೂರಿನ ಶಾಲೆ ಏನಾಗಲಿದೆ ಎಂಬ ಗೊಂದಲ ಎದುರಾಗಿದೆ.
100 ವಿದ್ಯಾರ್ಥಿಗಳಿರುವ ಶಾಲೆಗಳೂ ವಿಲೀನ:
ಹೊಂಗನೂರು ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಲು ಶಾಲೆಯ 6 ಕಿಮೀ ವ್ಯಾಪ್ತಿಯಲ್ಲಿರುವ 7 ಶಾಲೆಗಳನ್ನು ಕೆಪಿಎಸ್ ಜತೆ ವಿಲೀನಗೊಳಿಸಿ ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅ.23ರಂದು ಆದೇಶ ಹೊರಡಿಸಿದೆ. ವಿಲೀನಗೊಳ್ಳುತ್ತಿರುವ ಶಾಲೆಗಳಲ್ಲಿರುವ ಹುದ್ದೆಗಳನ್ನು ಸ್ಥಳಾಂತರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆ ಶಾಲೆಗಳಲ್ಲಿರುವ ಶಿಕ್ಷಕರು, ಭೌತಿಕ, ಶೈಕ್ಷಣಿಕ ದಾಖಲೆಗಳು, ಪೀಠೋಪಕರಣಗಳು ಮತ್ತು ಶಾಲೆಯಲ್ಲಿರುವ ಎಲ್ಲ ಸಾಮಾಗ್ರಿಗಳನ್ನು ಪಟ್ಟಿ ಮಾಡಿ ಹೊಂಗನೂರು ಕೆಪಿಎಸ್ ಶಾಲೆಗೆ ನೀಡುವಂತೆಯೂ ಆದೇಶ ಹೊರಡಿಸಲಾಗಿದೆ.
ವಿಲೀನಗೊಳ್ಳುತ್ತಿರುವ ಶಾಲೆಗಳ ಪೈಕಿ ಹೊಡಿಕೆ ಹೊಸಹಳ್ಳಿಯಲ್ಲಿ 77 ವಿದ್ಯಾರ್ಥಿಗಳುಮ ಕನ್ನೀದೊಡ್ಡಿ ಶಾಲೆಯಲ್ಲಿ 82, ಅಮ್ಮಳ್ಳಿ ದೊಡ್ಡಿಯಲ್ಲಿ 31, ಸಂತೆ ಮೊಗೇನಹಳ್ಳಿಯಲ್ಲಿ 100, ಮೊಗೇನಹಳ್ಳಿಯಲ್ಲಿ 20, ಸುಣ್ಣ ಘಟ್ಟ ಶಾಲೆಯಲ್ಲಿ 80 ಮತ್ತು ಚನ್ನಂಕೇಗೌಡನದೊಡ್ಡಿಯಲ್ಲಿ 2 ವಿದ್ಯಾರ್ಥಿಗಳಿದ್ದಾರೆಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಆದೇಶವಿದೆ. ಇದೇ ಪರಿಸ್ಥಿತಿ ರಾಜ್ಯಾದ್ಯಂತ ಎದುರಾಗಲಿದೆಯೇ ಎಂಬ ದುಗುಡ ಎದುರಾಗಿದೆ.

50 ಮಕ್ಕಳಿರುವ 25 ಸಾವಿರ ಶಾಲೆ:

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ರಾಜ್ಯದಲ್ಲಿ ಒಟ್ಟು 46,174 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 25,683 ಶಾಲೆಗಳಿವೆ. ಸರ್ಕಾರಿ ಶಾಲೆಯಲ್ಲಿ ಕಳೆದ 10 ವರ್ಷದಲ್ಲಿ (2015-16ರಿಂದ 2025-26) 47.1 ಲಕ್ಷದಿಂದ 38.2 ಲಕ್ಷಕ್ಕೆ ಕುಸಿದಿದೆ. ದಾಖಲಾತಿ ಪ್ರಮಾಣದಲ್ಲಿ ಶೇ.46ರಿಂದ 38ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ 36.3 ಲಕ್ಷದಿಂದ 47 ಲಕ್ಷಕ್ಕೆ ಏರಿಕೆಯಾಗಿದೆ. ಶೇ.29ರಷ್ಟು ಹೆಚ್ಚಳವಾಗಿದೆ ಎಂದು ಇಲಾಖೆ ದತ್ತಾಂಶಗಳೇ ಹೇಳುತ್ತಿವೆ.
ಒಂದು ವೇಳೆ ಹೊಂಗನೂರು ಕೆಪಿಎಸ್‌ನಂತೆ ಸುತ್ತಲಿನ ಶಾಲೆಗಳಲ್ಲಿ ವಿಲೀನಗೊಳಿಸಿದರೆ, ರಾಜ್ಯದ ಸರ್ಕಾರಿ ಶಾಲೆಗಳು ಉಳಿಯಲಿವೆಯೇ ಎಂದು ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ.

ಹೊಂಗನೂರು ಕೆಪಿಎಸ್‌ಗೆ ವಿಲೀನದ ಶಾಲೆಗಳ ಮಕ್ಕಳ ಸಂಖ್ಯೆ

ಶಾಲೆಗಳು ಮಕ್ಕಳ ಸಂಖ್ಯೆ
ಹೊಡಿಕೆ ಹೊಸಹಳ್ಳಿ 77
ಕನ್ನೀದೊಡ್ಡಿ ಶಾಲೆ 82
ಅಮ್ಮಳ್ಳಿ ದೊಡ್ಡಿ 31
ಮೊಗೇನಹಳ್ಳಿ 100
ಸುಣ್ಣ ಘಟ್ಟ 80

ಕೆಪಿಎಸ್ ಶಾಲೆಗಳ ಅನುಕೂಲಗಳು

- ದ್ವಿಭಾಷಾ ಮಾಧ್ಯಮ (ಕನ್ನಡ, ಇಂಗ್ಲಿಷ್)ದಲ್ಲಿ ಬೋಧನೆ
- ಶಾಲಾ ಕಟ್ಟಡ, ಮೈದಾನ, ಕ್ರೀಡಾ ಸಲಕರಣೆ ಸೇರಿ ಉತ್ತಮ ಮೂಲ ಸೌಕರ್ಯಗಳು
- ಟಿಇಟಿ ಮತ್ತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ)ಯಲ್ಲಿ ತೇರ್ಗಡೆ ಹೊಂದಿರುವ ಗುಣಮಟ್ಟದ ಬೋಧನಾ ಸಿಬ್ಬಂದಿ
- ಶಾಲೆಯ ಸಮೀಪದ ಗ್ರಾಮಗಳಿಂದ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ
- ಸರ್ಕಾರದಿಂದ ಸಿಗುವ ಸವಲತ್ತುಗಳು (ಬಿಸಿಯೂಟ, ಉಚಿತ ಸಮವಸ, ಪಠ್ಯಪುಸ್ತಕ, ಪೌಷ್ಟಿಕ ಆಹಾರಗಳಾದ ಮೊಟ್ಟೆ/ಬಾಳೇಹಣ್ಣು)
"

ಶಾಲೆಗಳನ್ನು ಕೆಪಿಎಸ್ ಜತೆ ವಿಲೀನಗೊಳಿಸಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಡಿಎಂಸಿ ನಿರ್ಧರಿಸಬೇಕು. ಪಾಲಕರು, ಮಕ್ಕಳು ಮತ್ತು ಎಸ್‌ಡಿಎಂಸಿ ಒಪ್ಪಿಗೆ ಇಲ್ಲದೆ ಶಾಲೆಗಳನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸುತ್ತಿಲ್ಲ. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ.