ಕೆಪಿಸಿಎಲ್ ಅಂತಿಮ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ಒಟ್ಟು 622 ಹುದ್ದೆಗಳ ನೇಮಕಾತಿ ಸಂಬಂಧ ಡಿ.27 ಮತ್ತು 28ರಂದು ನಡೆದ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.
ಈ ಮೂಲಕ ಇಡೀ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಅಭ್ಯರ್ಥಿಗಳು ಪಡೆದ ಅಂಕಗಳ ಮೆರಿಟ್ ಪಟ್ಟಿಯನ್ನು ಕೆಪಿಸಿಎಲ್ಗೆ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಆಯ್ಕೆ ಪಟ್ಟಿಯನ್ನು ಕೆಪಿಸಿಎಲ್ ಪ್ರಕಟಿಸಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ತಾತ್ಕಾಲಿಕ ಫಲಿತಾಂಶಕ್ಕೆ ಬಂದ ಆಕ್ಷೇಪಣೆಗಳನ್ನು ತಜ್ಞರ ಸಮಿತಿ ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮರು ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ನಡೆದು ಎಂಟು ದಿನಗಳಲ್ಲಿ ತಾತ್ಕಾಲಿಕ ಹಾಗೂ ಹತ್ತು ದಿನಗಳಲ್ಲಿ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.