ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕೆಒಎಸ್ ಪರೀಕ್ಷೆ
- ಮಕ್ಕಳನ್ನು ಕೇವಲ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ಪರೀಕ್ಷೆ ಶುಲ್ಕವನ್ನು ಕೂಡ ಸರ್ಕಾರವೇ ಭರಿಸುವ ಮೂಲಕ ಯಾವೊಬ್ಬ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಶೇ.100 ಶೈಕ್ಷಣಿಕ ಸಾಧನೆ ಮಾಡಬೇಕೆಂಬ ಗುರಿ
- ವಲಸೆ, ಅನಾಥ, ಬಡತನ, ಸಮರ್ಪಕ ಶಿಕ್ಷಣ ದೊರೆಯದಿರುವುದು ಸೇರಿ ವಿವಿಧ ಕಾರಣಗಳಿಗೆ ಶಾಲೆ ಬಿಟ್ಟ ಮಕ್ಕಳು ಶಿಕ್ಷಣದಿಂದ ವಂಚಿತ
- ಶಾಲೆ ಬಿಟ್ಟ ಮಕ್ಕಳಿಗೆ ಹೊಸ ಚೈತನ್ಯ ನೀಡಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.
- ಕೆಎಸ್‌ಇಎಬಿ ದತ್ತಾಂಗಳ ಪ್ರಕಾರ, ರಾಜ್ಯಾದ್ಯಂತ ಒಟ್ಟು 38,469 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ
ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಮುಕ್ತ ಶಾಲೆ (ಕೆಒಎಸ್) ಮೂಲಕ ಪರೀಕ್ಷೆ ನೋಂದಣಿ ಮಾಡಿಕೊಳ್ಳುವ ನೂತನ ಯೋಜನೆಯನ್ನು ರೂಪಿಸಿದೆ.
ಮಕ್ಕಳನ್ನು ಕೇವಲ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ಪರೀಕ್ಷೆ ಶುಲ್ಕವನ್ನು ಕೂಡ ಸರ್ಕಾರವೇ ಭರಿಸುವ ಮೂಲಕ ಯಾವೊಬ್ಬ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಶೇ.100 ಶೈಕ್ಷಣಿಕ ಸಾಧನೆ ಮಾಡಬೇಕೆಂಬ ಗುರಿಯೊಂದಿಗೆ ಹೆಜ್ಜೆಯನ್ನಿಟ್ಟಿದೆ.
ವಲಸೆ, ಅನಾಥ, ಬಡತನ, ಸಮರ್ಪಕ ಶಿಕ್ಷಣ ದೊರೆಯದಿರುವುದು ಸೇರಿ ವಿವಿಧ ಕಾರಣಗಳಿಗೆ ಶಾಲೆ ಬಿಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಮುಕ್ತ ಶಾಲೆ ಮೂಲಕ ಶಿಕ್ಷಣ ಕೊಡಿಸಿದರೆ, ವಿವಿಧ ತರಬೇತಿ ಹಾಗೂ ವೃತ್ತಿ ಕಾರಣಗಳಿಗೆ ಶೈಕ್ಷಣಿಕ ಪ್ರಮಾಣಪತ್ರಗಳು ಉಪಯೋಗಕ್ಕೆ ಬರಲಿವೆ. ಈ ಹಿನ್ನೆಲೆಯಲ್ಲಿ ಶಾಲೆ ಬಿಟ್ಟ ಮಕ್ಕಳಿಗೆ ಹೊಸ ಚೈತನ್ಯ ನೀಡಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.
15 ವರ್ಷ ಮೇಲ್ಪಟ್ಟ ಮಕ್ಕಳನ್ನು ಕೆಒಎಸ್ ಪರೀಕ್ಷೆಗೆ ನೋಂದಾಯಿಸುವ ಸಂಬಂಧ ಕೇಂದ್ರ ಶಿಕ್ಷಣ ಮಂತ್ರಾಲಯದ ಪಿಎಬಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರವು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಶಾಲೆ ಬಿಟ್ಟಿರುವ 38,469 ಮಕ್ಕಳು
ಕಳೆ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ವತಿಯಿಂದ ದತ್ತಾಂಗಳನ್ನು ಪಡೆಯಲಾಗಿದೆ. ಆ ಪ್ರಕಾರ, ರಾಜ್ಯಾದ್ಯಂತ ಒಟ್ಟು 38,469 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಗುರುತಿಸಲಾಗಿದೆ.
ಈ 38,469 ಮಕ್ಕಳೂ ಸೇರಿ 15 ವರ್ಷ ಮೇಲ್ಪಟ್ಟ ಶಾಲೆಯಿಂದ ಹೊರಗುಳಿದ ಒಟ್ಟು 64,573 ಮಕ್ಕಳನ್ನು ಕರ್ನಾಟಕ ಮುಕ್ತ ಶಾಲೆಯ ‘ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಪರೀಕ್ಷೆ’ಗಳಿಗೆ ನೋಂದಾಯಿಸಿಕೊಳ್ಳಲಾಗುತ್ತಿದೆ.
ಪರೀಕ್ಷಾ ಶುಲ್ಕಕ್ಕೆ 12.91 ಕೋಟಿ ರೂ. ಬಿಡುಗಡೆ:
ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಶಾಲೆಯನ್ನು ತ್ಯಜಿಸಿರುವ ಸಾಧ್ಯತೆಗಳಿರುತ್ತವೆ. ಅಂತಹ ಮಕ್ಕಳಿಗೆ ಪರೀಕ್ಷೆ ಶುಲ್ಕವು ಹೊರೆಯಾಗಬಾರದು ಎಂಬ ಕಾರಣದಿಂದ ಪ್ರತಿ ವಿದ್ಯಾರ್ಥಿಗೆ ಎರಡು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು 12.91 ಕೋಟಿ ರೂ.ಗಳನ್ನ ಶುಲ್ಕಕ್ಕಾಗಿ ಅನುಮೋದನೆ ನೀಡಿದೆ.
ಕೆಒಎಸ್ ನೋಂದಾಯಿಸುವ ಕ್ರಮ
- ಮಕ್ಕಳ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 220 ಎನ್‌ಐಒಎಸ್ ಅಧ್ಯಯನ ಕೇಂದ್ರಗಳ ಜತೆಗೆ ಪ್ರತಿ ತಾಲೂಕಿಗೆ ಒಂದರಂತೆ ಹೆಚ್ಚುವರಿ ಕೇಂದ್ರವನ್ನು ಗುರುತಿಸುವುದು
- ಪ್ರತಿ ತಾಲೂಕು/ಪಟ್ಟಣಕ್ಕೆ ಒಂದರಂತೆ ಕೆಒಎಸ್ ಅಧ್ಯಯನ/ಪರೀಕ್ಷಾ ಕೇಂದ್ರವಾಗಿ ಗುರುತಿಸುವುದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಾರ್ಯಾಗಾರಗಳ ಆಯೋಜನೆ
- ಗುರುತಿಸಿದ ಮಕ್ಕಳಿಗೆ ಕೆಒಎಸ್ ಪರೀಕ್ಷೆ ಪರಿಚಯಿಸಿ ಪರೀಕ್ಷೆಗೆ ನೋಂದಾಯಿಸಲು ಪಾಲಕರು ಮತ್ತು ಮಕ್ಕಳಿಗಾಗಿ ಬ್ಲಾಕ್/ಕ್ಲಸ್ಟರ್ ಹಂತದಲ್ಲಿ ಕಾರ್ಯಾಗಾರ ನಡೆಸಬೇಕು
- ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಧ್ಯಮ, ವಿಷಯ, ಆಯ್ಕೆ ಹಾಗೂ ಪರೀಕ್ಷಾ ಸಿದ್ಧತೆಗೆ ಸಮೀಪದ ಗ್ರಂಥಾಲಯ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಮಾರ್ಗದರ್ಶನ ನೀಡುವುದು
- ನೋಂದಣಿ ಮಾಡಿಕೊಂಡ ವಿದ್ಯಾರ್ಥಿಯ ಪರೀಕ್ಷೆ ಮುಗಿಯುವವರೆಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುವುದು
ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಶೈಕ್ಷಣಿಕ ಮುಖ್ಯವಾಹಿನಿಗೆ ತರಲು ಪರಿಣಾಮಕಾರಿ ಯೋಜನೆಯನ್ನು ರೂಪಿಸಲಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ ಯಾವೊಬ್ಬ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಶಿಕ್ಷಣ ಇಲಾಖೆ ಉದ್ದೇಶ ಮತ್ತು ಗುರಿಯಾಗಿದೆ.
— - ಕೆ. ವಿದ್ಯಾಕುಮಾರಿ, ರಾಜ್ಯ ಯೋಜನಾ ನಿರ್ದೇಶಕಿ, ಸಮಗ್ರ ಶಿಕ್ಷಣ ಕರ್ನಾಟಕ