ನನದಿಯ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಅಂಕಲಿ ಡಾ.ಪ್ರಭಾಕರ ಕೋರೆ ಸಹಕಾರ ಸೊಸೈಟಿ ಶಾಖೆಯಲ್ಲಿ 35ನೇ ವಾರ್ಷಿಕೋತ್ಸವ ನಿಮಿತ್ತ ಸರಸ್ವತಿ ಪೂಜೆ ನೆರವೇರಿಸಲಾಯಿತು. ಶಿವಾನಂದ ಹಕಾರೆ, ಡಾ.ಆರ್.ಬಿ.ಖಾಂಡಗಾವೆ, ಸಂದೀಪ ಜೋಗೋಜೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಾಂಜರಿ
ಅಂಕಲಿಯ ಡಾ.ಪ್ರಭಾಕರ ಕೋರೆ ಬಹುರಾಜ್ಯ ಸಹಕಾರ ಸೊಸೈಟಿ ಸಂಸ್ಥಾಪಕ ಡಾ.ಪ್ರಭಾಕರ ಕೋರೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ ಮಾರ್ಗದರ್ಶನದಲ್ಲಿ ಅಭಿವದ್ಧಿ ಹೊಂದುತ್ತಿದೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಶಾಖೆ ಆರಂಭಿಸಲಾಗುವುದು ಎಂದು ಶಾಖಾ ಅಧ್ಯಕ್ಷ ಶಿವಾನಂದ ಹಕಾರೆ ಹೇಳಿದರು.
ಸಮೀಪದ ನನದಿ ಗ್ರಾಮದ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಅಂಕಲಿ ಡಾ.ಪ್ರಭಾಕರ ಕೋರೆ ಸಹಕಾರ ಸೊಸೈಟಿ ಶಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಥಳೀಯ ಶಾಖೆ 35ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಾಖೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 23.86 ಕೋಟಿ ರೂ. ಠೇವಣಿ ಸಂಗ್ರಹಿಸಿ, 3.54 ಕೋಟಿ ರೂ. ಸಾಲ ವಿತರಿಸಿ, 897.75 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ, ಕಳೆದ ಆರ್ಥಿಕ ವರ್ಷದಲ್ಲಿ 65 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಗ್ರಾಮೀಣ ಭಾಗದ ಜನರಿಗೆ ಹಲವಾರು ರೀತಿಯ ಆರ್ಥಿಕ ಸೇವೆ, ಜೀವ ವಿಮೆ ಹಾಗೂ ವಾಹನ ವಿಮೆ ಒದಗಿಸುತ್ತ ಕೋರ್ ಬ್ಯಾಂಕಿಂಗ್ ಸೇವೆಯೊಂದಿಗೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಶಾಖೆಯ ಅಮೋಘ ಬೆಳವಣಿಗೆಗೆ ಎಲ್ಲ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಸೇವೆ, ಗ್ರಾಹಕರ ಪ್ರೀತಿ ವಿಶ್ವಾಸ ಹಾಗೂ ಸಹಾಯ ಸಹಕಾರ ನೀಡುತ್ತಿರುವುದೇ ಕಾರಣ ಎಂದು ಹೇಳಿದರು.
ಶಾಖೆಯ 35ನೇ ವಾರ್ಷಿಕೋತ್ಸವ ನಿಮಿತ್ತ ಶ್ರೀ ಲಕ್ಷ್ಮೀ ದೇವಿ ಪೂಜೆಯನ್ನು ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹಕಾರೆ ಹಾಗೂ ಸಿಬಿಕೆಎಸ್‌ಎಸ್‌ಕೆ ಕಾರ್ಖಾನೆ ವ್ಯವಸಾಪಕ ನಿರ್ದೇಶಕ ಡಾ.ಆರ್.ಬಿ.ಖಾಂಡಗಾಂವೆ ನೆರವೇರಿಸಿದರು.
ಶಾಖಾ ವ್ಯವಸ್ಥಾಪಕ ಸಂದೀಪ ಜೋಗೋಜೆ, ಶಾಖಾ ಕಚೇರಿ ಸಂಚಾಲಕರು, ಕಾರ್ಖಾನೆ ಅಧಿಕಾರಿ ವರ್ಗ, ಗ್ರಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.