ವಿಜಯಪುರ ಹೋಬಳಿ ಕೋರಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯ.
ವಿಜಯಪುರ : ದೇವನಹಳ್ಳಿ ತಾಲೂಕು ಕೋರಮಂಗಲ ಗ್ರಾಮ ಪಂಚಾಯಿತಿಯು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹ ವಸೂಲಿ ಮಾಡಿ ಗಣನೀಯ ಸಾಧನೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರಶಂಸಾ ಪತ್ರ ನೀಡಿದೆ.
2025&-26ನೇ ಸಾಲಿಗೆ ಪಂಚಾಯಿತಿಯಲ್ಲಿ ತಯಾರಿಸಿದ್ದ ಅಂದಾಜು ಬಜೆಟ್ನಲ್ಲಿ 13 ಲಕ್ಷ ರೂ. ತೆರಿಗೆ ಸಂಗ್ರಹ ಗುರಿ ಹೊಂದಿತ್ತು. 2026ರ ಮಾರ್ಚ್ವರೆಗೆ 17.32 ಲಕ್ಷ ರೂ. ತೆರಿಗೆ ಸಂಗ್ರಹಿಸುವ ಮೂಲಕ ಶೇ.133.25 ಸಾಧನೆ ಮಾಡಿದೆ.
ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಲು ಸ್ಥಳಿಯ ಜನಪ್ರತಿನಿಧಿಗಳು ತೋರಿದ ಬದ್ಧತೆ ಮತ್ತು ಸ್ಥಳಿಯವಾಗಿ ಸಾರ್ವಜನಿಕರು, ತೋರಿದ ಪ್ರಾಮಾಣಿಕತೆಯಿಂದ ಪಂಚಾಯಿತಿಗೆ ಪ್ರಶಂಸಾ ಪತ್ರದ ಗರಿ ಮುಡಿಗೇರಿದೆ. ಸರ್ಕಾರದಿಂದ ಹೆಚ್ಚು ಅನುದಾನ ಸಿಗಬೇಕಾದರೆ, ಪಂಚಾಯಿತಿಗಳಲ್ಲಿಯೂ ಹೆಚ್ಚು ತೆರಿಗೆ ಸಂಗ್ರಹವಾಗಬೇಕಿದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ನಿರಂತರವಾಗಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಸಂಚರಿಸಿ, ತೆರಿಗೆ ಸಂಗ್ರಹ ಮಾಡಿರುವುದು ಪಂಚಾಯಿತಿಗೆ ಕೀರ್ತಿ ತಂದುಕೊಟ್ಟಿದೆ.
ಸಾರ್ವಜನಿಕರಿಂದ ಪೂರ್ಣ ಪ್ರಮಾಣದಲ್ಲಿ ತೆರಿಗೆ ಕಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಸಿಬ್ಬಂದಿ ಸಾಕಷ್ಟು ಬಾರಿ ಮನೆಗಳ ಬಳಿಗೆ ಸುತ್ತಬೇಕಾಗುತ್ತದೆ. ಆದರೂ ನಮ್ಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಆಯಾ ಗ್ರಾಮಗಳ ಜನಪ್ರತಿನಿಧಿಗಳ ಸಹಕಾರದಿಂದ ತೆರಿಗೆ ಸಂಗ್ರಹ ಮಾಡಲಾಗಿದೆ.
— > ಸಿ. ದೇವರಾಜ್, ಅಧ್ಯಕ್ಷ ಕೋರಮಂಗಲ ಗ್ರಾಪಂ
ರಾಜ್ಯ ಸರ್ಕಾರ ಪ್ರಶಂಸಾ ಪತ್ರ ನೀಡಿರುವುದು ಖುಷಿ ತಂದಿದ್ದು, ಇದರ ಜತೆಯಲ್ಲೇ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. 2026-&27ನೇ ಸಾಲಿನಲ್ಲೂ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲು ಯೋಜನೆ ರೂಪಿಸುತ್ತೇವೆ. ಸಾರ್ವಜನಿಕರೂ ಉತ್ತಮ ಸ್ಪಂದನೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ.
— > ರಾಘವೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋರಮಂಗಲ ಗ್ರಾಪಂ