ಚಿತ್ರ ೨೮ ಕೆ.ಎಲ್.ಆರ್. ೦೩ : ಕೋಲಾರ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಮಾರಾಟವಾಗುತ್ತಿರುವುದು.
ಕೋಲಾರದ ಕೆಂಪು ಸುಂದರಿಯೆAದೇ ದೇಶಾದ್ಯಂತ ಸದ್ದು ಮಾಡಿರುವ ಟೊಮೆಟೋ ೧೫ ಕೆ.ಜಿ.ಬಾಕ್ಸ್ ೧ ಸಾವಿರ ರೂ.ಗಳ ತನಕ ಮಾರಾಟವಾಗುತ್ತಿದ್ದು, ರೈತರ ಮೊಖದಲ್ಲಿ ಈ ವರ್ಷದ ಕೊನೆ ದಿನಗಳಲ್ಲಿ ಸಂತಸ ತರುವಂತಾಗಿದೆ. ಈ ಧಾರಣೆ ಇನ್ನೂ ಒಂದು ತಿಂಗಳು ಇದ್ದರೂ ೨೦೨೬ರ ಹೊಸ ವರ್ಷದಲ್ಲಿ ರೈತನಿಗೆ ಸಿಹಿ ಕೊಡುವ ವರ್ಷ ಎನಿಸುತ್ತದೆ.
ಸತತವಾಗಿ ಎರಡು ಮೂರು ವರ್ಷಗಳಿಂದ ಟೊಮೆಟೋಗೆ ಬೆಲೆ ಏರಿಕೆಯಾಗದೆ ರೈತರು ಕಂಗಾಲಾಗಿದ್ದರು. ಈ ಮಧ್ಯೆ ವೈರಸ್ ಕಾಟ ಬೇರೆ ರೈತರನ್ನು ಕಾಡುತ್ತಿದ್ದು, ಉತ್ತಮ ಬೆಳೆ ಮಾಡಿದರು ಫಸಲಿಗೆ ವೈರಸ್ ತಗುಲಿ ಕಾಯಿ ಬಿಡುವ ವೇಳೆಗೆ ಕ್ಷೀಣಿಸುತ್ತಿತ್ತು. ಇದ್ದ ಫಸಲಿಗೂ ಬೆಲೆ ಬಾರದ ಕಾರಣ ರೈತರು ಸಾಲದ ಸುಳಿಗೆ ಸಿಕ್ಕಿ ಒದ್ದಾಡುತ್ತಿದ್ದರು.
ಈ ವರ್ಷ ಏಪ್ರಿಲ್‌ನಿಂದ ಪ್ರಾರಂಭವಾಗುವ ಸುಗ್ಗಿಯು ರೈತನ ಕೈ ಹಿಡಿಯಲಿಲ್ಲ. ಟೊಮೆಟೋ ಬೆಲೆ ಹಾವು-ಏಣಿ ಆಟದಂತೆ ಒಂದು ವಾರ ಇದ್ದ ಬೆಲೆ ಮತ್ತೊಂದು ವಾರಕ್ಕೆ ಕುಸಿಯುವಂತಾಗಿತ್ತು. ಇದರಿಂದ ರೈತರು ಹಾಕಿದ ಬಂಡವಾಳವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿತ್ತು. ಕಳೆದ ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ದಿನೇ ದಿನೇ ಬಲೆ ಏರಿಕೆ ಆಗುತ್ತಿದೆ. ಶನಿವಾರ ೧೫ ಕೆ.ಜಿ.ಬಾಕ್ಸ್ ಟೊಮೆಟೋ ೧ ಸಾವಿರ ರೂ.ಗಳ ತನಕ ಮಾರಾಟವಾಗಿದೆ. ಭಾನುವಾರ ಮತ್ತೆ ೪೦ ರೂ.ಗಳು ಕಡಿಮೆಯಾಗಿದ್ದು, ೯೬೦ ರೂ.ಗಳಿಗೆ ಮಾರಾಟವಾಗಿದೆ.
ಗುಣಮಟ್ಟ ಇರುವ ಹಣ್ಣು ೧೦೦೦ ರೂ.ಗಳ ತನಕ ಮಾರಾಟವಾಗುತ್ತಿದ್ದರೆ, ಗುಣಮಟ್ಟ ಇಲ್ಲದ ಹಣ್ಣು ೪೦೦ ರೂ.ಗಳಿಂದ ೮೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಲ್ಲಿ ಟೊಮೆಟೋ ಬೇಡಿಕೆ ಇರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.
ನಾಟಿ ಟೊಮೆಟೋ ೪೦೦ ರೂ.ಗಳಿಂದ ೮೫೦ ರೂ.ಗಳ ತನಕ ಮಾರಾಟವಾದರೆ ಸೀಡ್ಸ್ ಟೊಮೆಟೋ ೪೦೦ ರೂ.ಗಳಿಂದ ೧೦೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದಿAದ ಬರುವ ಟೊಮೆಟೋವು ಸಹ ೪೫೦ ರೂ.ಗಳಿಂದ ೭೫೦ ರೂ.ಗಳ ತನಕ ಮಾರಾಟವಾಗುತ್ತಿದೆ. ಪ್ರತಿದಿನ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ಹತ್ತಾರು ಲೋಡ್‌ನಷ್ಟು ಟೊಮೆಟೋ ರಫ್ತಾಗುತ್ತಿದೆ. ಆದ್ದರಿಂದ ಬೆಲೆಯು ಹೆಚ್ಚಾಗಿರುವುದರಿಂದ ರೈತನ ಮುಖದಲ್ಲಿ ಮಂದಹಾಸ ಬೀರುವಂತೆ ಆಗಿದೆ.
ಹೊಸ ವರ್ಷದ ಜನವರಿ ತನಕ ಹಾಗೂ ನಂತರವೂ ಇದೇ ಬೆಲೆ ಕಾಯ್ದುಕೊಂಡು ಬರುತ್ತದೆಂಬ ಲೆಕ್ಕಾಚಾರ ತಜ್ಞರ ಮಾತಾಗಿದೆ. ಜಿಲ್ಲೆಯಲ್ಲಿ ಟೊಮೆಟೋ ಬೆಳೆಗಾರರ ತೋಟಗಳು ಕ್ಷೀಣಿಸಿವೆ. ಇರುವ ಫಸಲಿಗೆ ಬೆಲೆ ಸಿಗುತ್ತಿರುವುದರಿಂದ ನಷ್ಟ ಕಾಯ್ದುಕೊಂಡು ಹೋಗುತ್ತಿದೆ ಎನ್ನುತ್ತಾರೆ ರೈತರು.
ಸುಗ್ಗಿಯಲ್ಲಿ ರೈತನ ಕೈ ಹಿಡಿಯದ ಕಾರಣ ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ. ಈ ಹಂತದಲ್ಲಿ ರೈತರು ಇರುವ ತೋಟಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಗುಣಮಟ್ಟವಿಲ್ಲದ ಕಾಯಿಗೂ ಈಗ ಡಿಮ್ಯಾಂಡ್ ಉಂಟಾದAತೆ ಆಗಿದೆ.