ಹುಣಸಗಿ ತಾಲೂಕಿನ ಕೊಡೇಕಲ್​ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭದಿಂದ ಜರುಗಿತು. 
ರಾಜ್ಯ

ಭಕ್ತ ಸಾಗರದಲ್ಲಿ ಮಿಂದೆದ್ದ ಕೊಡೇಕಲ್​

ಪ್ರಮುಖ ಮುಖ್ಯಾಂಶಗಳು

  • ವೈಭವದ ಜೋಡು ಪಲ್ಲಕ್ಕಿ ಉತ್ಸವ
  • ಫಾಥೆ ಹೊರಡಿಸಿದ ಮುಸ್ಲಿಂ ಬಾಂಧವರು
ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್​ ಗ್ರಾಮದ ಭಾವೈಕ್ಯೆತೆಯ ಹರಿಕಾರ ಶ್ರೀ ಬಸವೇಶ್ವರ ಜಾತ್ರೆ ನಿಮಿತ್ತಮ ಶುಕ್ರವಾರ ಜೋಡು ಪಲ್ಲಕ್ಕಿ ಉತ್ಸವ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಅವರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆದವು. 7ಕ್ಕೆ ಪ್ಯಾಟಿ ಬಸವೇಶ್ವರದೇವಸ್ಥಾನದಿಂದ ಬಂದ ಪಲ್ಲಕ್ಕಿ ಗ್ರಾಮದ ದೇವಸ್ಥಾನಕ್ಕೆ ತಲುಪಿದ ನಂತರ ಎರಡು ದೇವಸ್ಥಾನಗಳ ಪಲ್ಲಕ್ಕಿಗಳು ಛತ್ರಕಟ್ಟೆಯಲ್ಲಿ ವಿರಾಜಮಾನವಾದವು. ಈ ವೇಳೆ ಪಲ್ಲಕ್ಕಿಗಳಿಗೆ ಭಕ್ತರಿಂದ ಚಾಮರ ಸೇವೆ, ವಿಶೇಷ ಪೂಜೆ ಜರುಗಿದವು. ನಂತರ ವಾದ್ಯಮೇಳಗಳ ಮೂಲಕ ಮೆರವಣಿಗೆಯೊಂದಿಗೆ ಸಾಂಪ್ರದಾಯಿಕ ಪೋಷಾಕು ಧರಿಸಿ ಆಗಮಿಸಿದ ಪೂಜ್ಯ ಶ್ರೀ ವೃಷಭೇಂದ್ರ ಅಪ್ಪ ಅವರು ಪೂಜೆ ಸಲ್ಲಿಸುವ ಮೂಲಕ ಜೋಡು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ವಾದ್ಯಮೇಳಗಳ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಜೋಡು ಪಲ್ಲಕ್ಕಿ ಉತ್ಸವದ ಮುಂದೆ ಗುರು ವರ್ಗದವರು ಬಸವಣ್ಣನವರ ವಚನ ಪಠಣವನ್ನು ಹಿಮ್ಮುಖವಾಗಿ ಪಠಿಸುತ್ತಾ ಸಾಗಿದರು. ಪಲ್ಲಕ್ಕಿ ಉತ್ಸವ ನೋಡಲು ಸಾವಿರಾರು ಭಕ್ತರು ಆಗಮಿಸುವ ಮೂಲಕ ಪಲ್ಲಕ್ಕಿಗಳಿಗೆ ಉತ್ತತ್ತಿಗಳನ್ನು ಹಾರಿಸಿ ಜೈೂಷಗಳು ಕೂಗಿದರು.
ಅಗಸಿ ದ್ವಾರದಿಂದ ಸಾಗಿದ ಪಲ್ಲಕ್ಕಿ ಉತ್ಸವ ಮೆರವಣಿಗೆ ಪ್ಯಾಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಮೂರು ಪ್ರದಣೆ ಹಾಕಿದ ನಂತರ ಮುಸ್ಲಿಂ ಬಾಂಧವರು ಪಾಥೆ ಹೊರಡಿಸಿದ ಮೇಲೆ ಬಾರಾಬಲೂತಿ ಮಿರಸ್ತೆದಾರರು ಧೂಳಕಾಯಿ ಒಡೆದರು. ಮತ್ತೆ ಮಧ್ಯಾಹ್ನದ ವೇಳೆ ಪಲ್ಲಕ್ಕಿ ಉತ್ಸವ ಗ್ರಾಮದೊಳಗಿನ ದೇವಸ್ಥಾನಕ್ಕೆ ಆಗಮಿಸಿದ ನಂತರ ಸಂಪ್ರದಾಯದಂತೆ ಧೂಳಕಾಯಿ ಒಡೆದರು. ಎಲ್ಲರಿಗೂ ಸಕ್ಕರೆ ಹಂಚಿದ ನಂತರ ಪಟ್ಟದಕುದುರೆ ಮೆವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು.
ಬಸವಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಅವರ ಸಾನ್ನಿಧ್ಯದಲ್ಲಿ ಜರುಗಿದ ಜಾತ್ರಾ ಮಹೋತ್ಸವದಲ್ಲಿ ರಾಜಾ ಕೌಶಿಕನಾಯಕ ಜಹಾಗೀರದಾರ, ರಾಜಾ ಸುಜಯಸಿಂಹನಾಯಕ ಜಹಾಗೀದಾರ, ಬಾರಾಬಲೂತಿ ಮಿರಸ್ತೆದಾರರು, ವತನದಾರರು, ಗುರುವರ್ಗ, ಶಿಷ್ಯವರ್ಗ, ಗ್ರಾಮದ ಪ್ರಮುಖರು ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಕೊಡೇಕಲ್​ ಮತ್ತು ನಾರಾಯಣಪುರ ಪೋಲಿಸ್​ಠಾಣೆ ಸಿಬ್ಬಂದಿ ಜಾತ್ರೆಯಲ್ಲಿ ಸೂಕ್ತ ಬಂದೋಬಸ್ತ್​ ಮಾಡಿದ್ದರು.