ದೊಡ್ಡಬಳ್ಳಾಪುರದ ಡಾ.ಅಂಬೇಡ್ಕರ್​ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್​, ಕೋಶಾಧ್ಯಕ್ಷ ಜಿ.ಸುರೇಶ್​, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ವಿದ್ಯಾರ್ಥಿನಿಲಯ ಪಾಲಕಿ ರಾಧಾಮಣಿ, ಸಿ.ಅಣ್ಣಯ್ಯ ಇತರರು ಇದ್ದರು.  
ರಾಜ್ಯ

ವ್ಯಕ್ತಿತ್ವ ವಿಕಸನಕ್ಕೆ ಬೇಕು ಜ್ಞಾನಾರ್ಜನೆ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ದೊಡ್ಡಬಳ್ಳಾಪುರ : ಜ್ಞಾನಾರ್ಜನೆಯು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಮತ್ತು ನಿರಂತರ ಓದಿನಿಂದ ಜ್ಞಾನ ವೃದ್ಧಿಸುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್​ ಹೇಳಿದರು.
ನಗರದ ಡಾ.ಅಂಬೇಡ್ಕರ್​ ಸರ್ಕಾರಿ ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್​ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀೆ ಸಿದ್ಧತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಶಿಕ್ಷಣ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಪ್ರಾರಂಭಿಸುತ್ತಾರೆ. ಅದಕ್ಕೆ ಬದಲಾಗಿ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧಗೊಳ್ಳುವುದು ಹೆಚ್ಚು ಅನುಕೂಲಕರ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿ ಪಡೆಯಬೇಕು ಎಂಬುದು ಎಲ್ಲರ ಆಸೆ. ಆದರೆ ಆಸೆ ಇದ್ದರೆ ಸಾಲದು, ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳ ಬಗ್ಗೆ ಸಮಗ್ರ ಜ್ಞಾನ ಪಡೆದುಕೊಳ್ಳಬೇಕು. ನೀವು ಪರೀಕ್ಷೆಗಳಲ್ಲಿ ಎದುರಿಸಬಹುದಾದ ಪ್ರಶ್ನೆಗಳ ಮಾದರಿ ಮತ್ತು ಪರಿಕಲ್ಪನೆಗಳ ಬಗ್ಗೆ ಅರಿವು ಹೊಂದಿರಬೇಕು. ಸಕಾರಾತ್ಮಕ ಚಿಂತನೆಗಳ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎನ್​.ಶೇಷಾದ್ರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ಭಾಗವಹಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಉಚಿತ ತರಬೇತಿ ನೀಡುವ ಯೋಜನೆ ಇದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ ಮತ್ತು ಪರಿಕರಗಳನ್ನು, ವಿಷಯ ತಜ್ಞರಿಂದ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.