ಕಲಬುರಗಿ ಸಿಯುಕೆಯಲ್ಲಿ ಮಂಗಳವಾರ ನಡೆದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಬಸವರಾಜ ಕುಬಕಡ್ಡಿ, ಡಾ.ಪಾಂಡುರಂಗ ವಿ., ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪವಿತ್ರಾ ಆಲೂರ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಭಿಮತ
- ಸಿಯುಕೆಯಲ್ಲಿ ಪಿಜಿ ವಿದ್ಯಾರ್ಥಿಗಳ ಸ್ವಾಗತ
ಕಲಬುರಗಿ: ಇಂದಿನ ಆಧುನಿಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಮಾಣಪತ್ರಗಳಿಗಿಂತ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ ಹೆಚ್ಚಿನ ಮಹತ್ವ ಪಡೆದಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆಯಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗ ಮಂಗಳವಾರ ಏರ್ಪಡಿಸಿದ್ದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ ಜೀವನವನ್ನು ಶೈಕ್ಷಣಿಕ, ವೃತ್ತಿಪರ ಹಾಗೂ ವೈಯಕ್ತಿಕ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಆಯಾ ರಾಜ್ಯದ ವೈವಿಧ್ಯಮಯ ಸಂಸತಿ ಮತ್ತು ಹಿನ್ನೆಲೆ ಅರಿಯುವ ಮತ್ತು ಪರಸ್ಪರ ಕಲಿಯುವ ಅಪೂರ್ವ ಅವಕಾಶ ದೊರೆಯುತ್ತದೆ. ಆದ್ದರಿಂದ ನಮ್ಮ ವಿವಿ ಒಂದು ಸಣ್ಣ ಭಾರತವಾಗಿದೆ. ವಿವಿಯ ಉದ್ಯೋಗ ನಿಯೋಜನಾ ಘಟಕ (ಪ್ಲೇಸ್ಮೆಂಟ್ ಸೆಲ್), ಸಂಶೋಧನೆ ಮತ್ತು ವೃದ್ಧಿ ಕೋಶ, ಭಾಷಾ ಕಲಿಕಾ ಪ್ರಯೋಗಾಲಯ, ವಿದ್ಯಾರ್ಥಿ ವೇತನದ ಸೌಲಭ್ಯ, ಕೇಂದ್ರೀಯ ಗ್ರಂಥಾಲಯ, ಅತ್ಯಾಧುನಿಕ ಪ್ರಯೋಗಾಲ ಸೇರಿ ವಸತಿ ನಿಲಯಗಳಂತಹ ಸುಸಜ್ಜಿತ ಸೌಲಭ್ಯ ಸಂಪೂರ್ಣ ಬಳಸಿಕೊಳ್ಳುವಂತೆ ಹೇಳಿದರು.
ವಿದ್ಯಾರ್ಥಿ ಕಲ್ಯಾಣ ಮತ್ತು ಕಾನೂನು ವಿಭಾಗದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಪ್ರಾಸ್ತಾವಿಕ ಮಾತನಾಡಿ, ಸಿಯುಕೆ ಜ್ಞಾನ ಮತ್ತು ಸಂಶೋಧನೆಯ ಪ್ರಮುಖ ಕೇಂದ್ರ. ವಿವಿ ಮೂಲಸೌಕರ್ಯ, ಆಧುನಿಕ ಉಪಕರಣ, ಗ್ರಂಥಾಲಯ ಸಂಪನ್ಮೂಲ, ಅಂತರ್ಜಾಲ ಸೌಲಭ್ಯ, ಸಂಶೋಧನಾ ಬೆಂಬಲ ಇತರ ವಿದ್ಯಾರ್ಥಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವಾಣಿಜ್ಯ ಮತ್ತು ನಿರ್ವಹಣಾ ಅಧ್ಯಯನದ ನಿಕಾಯ ಡೀನ್ ಪ್ರೊ.ಪಾಂಡುರಂಗ ವಿ., ಕಂಪ್ಯೂಟರ್ ವಿಜ್ಞಾನ ನಿಕಾಯ ಡೀನ್ ಪ್ರೊ.ಆರ್.ಎಸ್. ಹೆಗಡಿ, ಮಾನವಶಾಸ ಮತ್ತು ಭಾಷಾ ನಿಕಾಯ ಡೀನ್ ಪ್ರೊ.ವಿಕ್ರಮ ವಿಸಾಜಿ, ಸಾಮಾಜಿಕ ಮತ್ತು ವರ್ತನಾ ವಿಜ್ಞಾನಗಳ ನಿಕಾಯ ಡೀನ್ ಪ್ರೊ.ಪವಿತ್ರಾ ಆಲೂರ ಮಾತನಾಡಿದರು.
ಪರೀಕ್ಷಾ ವಿಷಯಗಳ ಕುರಿತು ಪ್ರಭಾರ ಪರೀಕ್ಷಾ ನಿಯಂತ್ರಕ ಪ್ರೊ.ಭರತಕುಮಾರ್, ವಿದ್ಯಾರ್ಥಿಗಳ ಶಿಸ್ತು ಮತ್ತು ಮೇಲ್ವಿಚಾರಣೆ ಕುರಿತು ಪ್ರೊ.ವೆಂಕಟರಮಣ ದೊಡ್ಡಿ, ಭಾಷಾ ಪ್ರಯೋಗಾಲಯ ಕುರಿತು ಪ್ರೊ.ಬಸವರಾಜ ಡೋಣೂರು, ವಿದ್ಯಾರ್ಥಿ ವೇತನ ಕುರಿತು ಅಂಕುಶ್ ಪಾಟೀಲ್, ಕ್ರೀಡಾ ವಿಭಾಗ ಕುರಿತು ಡಾ.ಸಾಯಿ ಅಭಿನವ್, ಸ್ವಯಂ ಪೋರ್ಟಲ್ ಕುರಿತು ಡಾ.ಆಂಜನೇಯಲು ಪೊನ್ನಂ, ಎನ್ಇಪಿ ಕುರಿತು ಪ್ರೊ.ಪ್ರಶಾಂತ, ಶೈಕ್ಷಣಿಕ ವಿಭಾಗ ಕುರಿತು ಮೊಹಮ್ಮದ್ ಖಯ್ಯುಮ್, ಗ್ರಂಥಾಲಯ ಕುರಿತು ಡಾ.ಪಿ.ಎಸ್. ಕಟ್ಟಿಮನಿ, ಎನ್ಎಸ್ಎಸ್ ಕುರಿತು ಡಾ.ಬುಚಿರೆಡ್ಡಿ, ಉದ್ಯಮಶೀಲತೆ ಮತ್ತು ಇನ್ಕ್ಯುಬೇಶನ್ ಕೇಂದ್ರ ಕುರಿತು ಪ್ರೊ.ರಾಜೀವ್ ಜೋಶಿ, ಉದ್ಯೋಗ ನಿಯೋಜನಾ ಘಟಕ ಕುರಿತು ಡಾ.ಪರಮೇಶ, ವಸತಿನಿಲಯ ಸೌಲಭ್ಯ ಕುರಿತು ಡಾ.ಬಸವರಾಜ ಎಂ., ಕೌನ್ಸೆಲಿಂಗ್ ಕುರಿತು ಸಂದೇಶ್ ಮತ್ತು ಉತ್ತರಾ ಮಾಹಿತಿ ನೀಡಿದರು.
ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಪ್ರಭಾಕರನ್, ಪ್ರೊ.ಪಾಂಡಾ, ಪ್ರೊ.ಸಂದೀಪ್ ಇತರರಿದ್ದರು. ಡಾ. ಶ್ರೀಲಕ್ಷ್ಮೀ ನಿರೂಪಣೆ ಮಾಡಿದರು.
ವಿದ್ಯಾರ್ಥಿಗಳ ವೃತ್ತೀಜಿವನ ನಿರ್ಮಾಣಕ್ಕೆ ಅತ್ಯಂತ ಕಠಿಣ ಪರಿಶ್ರಮ, ಶಿಸ್ತು, ಸಮಯ ಪಾಲನೆ, ಸಮರ್ಪಣಾ ಹಾಗೂ ನವೀನತೆಯ ಮನೋಭಾವ ಅತ್ಯಗತ್ಯ. ವಿದ್ಯಾರ್ಥಿಗಳು ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಹಾಗೂ ಸಾಮಾಜಿಕ ಜವಾಬ್ದಾರಿ ಮೂಲಕ ರಾಷ್ಟ್ರ ನಿರ್ಮಾಣದ ಭಾಗವಾಗಿ ವಿಕಸಿತ ಭಾರತ ದೃಷ್ಟಿಕೋನಕ್ಕೆ ಕೊಡುಗೆ ನೀಡಬೇಕು.
— > ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ, ಸಿಯುಕೆ ಕಲಬುರಗಿ