Knife attack over inherited property 
ರಾಜ್ಯ

ಪಿತ್ರಾರ್ಜಿತ ಆಸ್ತಿಗಾಗಿ ಚಾಕುವಿನಿಂದ ಹಲ್ಲೆ

ಚಿಂತಾಮಣಿ: ನಂದಿಗಾನಹಳ್ಳಿಯಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ಮಗನ ಮೇಲೆ ಚಿಕ್ಕಪ್ಪ, ಚಿಕ್ಕಮ್ಮ ಸೇರಿಕೊಂಡು ದೊಣ್ಣೆ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಎನ್​.ರಾಜು (40) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜು ಮತ್ತು ಆತನ ಚಿಕ್ಕಪ್ಪ ಹನುಮಂತಪ್ಪ ನಡುವೆ ಸರ್ವೇ ನಂ.131ರಲ್ಲಿರುವ 2 ಎಕರೆ ಪಿತ್ರಾರ್ಜಿತ ಜಮೀನಿನ ವಿಚಾರವಾಗಿ ಹಲವು ದಿನಗಳಿಂದ ವಿವಾದವಿತ್ತು. ಜಮೀನನ್ನು ಹನುಮಂತಪ್ಪ ಯಾರಿಗೂ ತಿಳಿಸದೆ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ರಾಜು ಜಮೀನಿನ ಭಾಗ ಕೇಳಿದಾಗಲೆಲ್ಲಾ ಹನುಮಂತಪ್ಪ ಮತ್ತು ಆತನ ಕುಟುಂಬದವರು ಗಲಾಟೆ ಮಾಡಿ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ.
ಜೂ.13ರಂದು ಸಂಜೆ ಹನುಮಂತಪ್ಪ ರಾಜು ಮನೆ ಬಳಿ ಧಾವಿಸಿ ಅವಾಚ್ಯವಾಗಿ ನಿಂದಿಸಿ, ಚಾಕುವಿನಿಂದ ರಾಜು ಬಲ ಭುಜಕ್ಕೆ ಚುಚ್ಚಿದ್ದಾನೆ. ಹನುಮಂತಪ್ಪನ ಪತ್ನಿ ಲಕ್ಷ್ಮಮ್ಮ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಗಾಯಗೊಂಡ ರಾಜು ಅವರನ್ನು ಆತನ ತಾಯಿ, ಅಕ್ಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಟ್ಲಹಳ್ಳಿ ಠಾಣೆ ಪೊಲೀಸರು ಜೂ.14ರಂದು ಆಸ್ಪತ್ರೆಗೆ ಭೇಟಿ ನೀಡಿ, ರಾಜು ಅವರಿಂದ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.