ಮುಧೋಳ ನಗರದ ಆರ್‌ಎಂಜಿ ಶಾಲಾ ಆವರಣದಲ್ಲಿ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಹಾಗೂ ಅಕ್ಷರ ದಾಸೋಹ ಯೋಜನೆಯಡಿ ಹಮ್ಮಿಕೊಂಡಿದ್ದ ಬಿಸಿಯೂಟ ಅಡುಗೆ ಸಿಬ್ಬಂದಿ ವಿಶೇಷ ಸಭೆಯನ್ನು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಉದ್ಘಾಟಿಸಿದರು. ಬಿಇಒ ಎಸ್.ಎಂ. ಮುಲ್ಲಾ, ಹನುಮಂತ ಅರಕೇರಿ, ಸಿ.ಸಿ. ಮೋದಿ ಇತರರಿದ್ದರು. 
ರಾಜ್ಯ

ಅಡುಗೆ ಸಿಬ್ಬಂದಿ ಆಹಾರ ಸುರಕ್ಷತಾ ಕ್ರಮ ಪಾಲಿಸಲಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಸೂಚನೆ
  • ಬಿಸಿಯೂಟ ಅಡುಗೆ ಸಿಬ್ಬಂದಿ ವಿಶೇಷ ಸಭೆ

ಮುಧೋಳ: ಅಡುಗೆ ಸಿಬ್ಬಂದಿ ಶಾಲೆಯ ಪ್ರತಿಯೊಬ್ಬ ಮಗುವನ್ನು ತಮ್ಮ ಸ್ವಂತ ಮಗುವೆಂದು ಭಾವಿಸಿ ಆಹಾರ ತಯಾರಿಸಿ ಬಡಿಸಿದರೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿರುವುದಿಲ್ಲ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಹೇಳಿದರು.

ನಗರದ ಆರ್‌ಎಂಜಿ ಶಾಲಾ ಆವರಣದಲ್ಲಿ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಹಾಗೂ ಅಕ್ಷರ ದಾಸೋಹ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಬಿಸಿಯೂಟ ಅಡುಗೆ ಸಿಬ್ಬಂದಿ ವಿಶೇಷ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಮುಗಳ ಖೋಡದಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಘಟನೆ ಹಿನ್ನೆಲೆ, ನಮ್ಮ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 279 ಅಡುಗೆ ಕೇಂದ್ರಗಳ ಮುಖ್ಯ ಅಡುಗೆ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಮಾಡಬೇಕು. ಕಡ್ಡಾಯವಾಗಿ ಪಾಲಿಸಬೇಕಾದ 10 ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸ್ವಚ್ಛತೆ, ಅಡುಗೆ ಕೊಠಡಿ ಹಾಗೂ ಸುತ್ತಮುತ್ತಲಿನ ಪರಿಸರದ ಶುಚಿತ್ವ, ವೈಯಕ್ತಿಕ ಸ್ವಚ್ಛತೆ, ಅಡುಗೆ ಪರಿಕರಗಳ ಗುಣಮಟ್ಟ, ಆಹಾರ ತಯಾರಿಕೆ ಹಾಗೂ ಬಡಿಸುವ ವಿಧಾನ, ಪಾತ್ರೆಗಳ ಶುಚಿತ್ವ, ಅಗ್ನಿ ಸುರಕ್ಷತೆ, ಗ್ಯಾಸ್ ಸುರಕ್ಷತಾ ನಿಯಮಗಳು ಹಾಗೂ ವಾರಕ್ಕೊಮ್ಮೆ ಡೀಪ್ ಕ್ಲೀನಿಂಗ್ ನಡೆಸಬೇಕು. ಇನ್ನು ಮುಂದೆ ವಿವಿಧ ಶಾಲೆಗಳಿಂದ ಆಹಾರದ ಮಾದರಿಗಳನ್ನು ನಿರಂತರವಾಗಿ ಪರೀಕ್ಷಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಮಾತನಾಡಿ, ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ 279 ಅಡುಗೆ ಕೇಂದ್ರಗಳ ಮುಖ್ಯ ಅಡುಗೆ ಸಿಬ್ಬಂದಿ ಆಹಾರ ಸುರಕ್ಷತೆ, ಮಕ್ಕಳ ಆರೋಗ್ಯ ರಕ್ಷಣೆ, ಶಾಲಾ ಸ್ವಚ್ಛತೆ ಹಾಗೂ ಗುಣಮಟ್ಟದ ಬಿಸಿಯೂಟ ನಿರ್ವಹಣೆಗೆ ಸಂಬಂಧಿಸಿದಂತೆ ನೀಡಲಾದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಭರವಸೆ ನೀಡಿದರು.
ಸಹಾಯಕ ನಿರ್ದೇಶಕ ಹನುಮಂತ ಅರಕೇರಿ ಸ್ವಾಗತಿಸಿದರು. ಆರ್.ಎಂ.ಜಿ. ಶಿಕ್ಷಣ ಸಂಸ್ಥೆಯ ಸಿ.ಸಿ. ಮೋದಿ ಸೇರಿ ಇತರರಿದ್ದರು.