Kishen Bilagali on Peacock Feather Controversy
ಬೆಂಗಳೂರು: ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಬಿಳಗಳಿ ಹಾಗೂ ನಿವೇದಿತಾ ಗೌಡ ಅವರ ನವಿಲು ಡ್ಯಾನ್ಸ್ ವಿರುದ್ಧ ಅರಣ್ಯ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು. ಈ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿದ ಬೆನ್ನಲ್ಲೇ ಖ್ಯಾತ ನೃತ್ಯಗಾರ ಕಿಶನ್ ಬಿಳಗಳಿ ಸ್ಪಷ್ಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಣ್ಣ ವಯಸ್ಸಿನಿಂದ ನಾನು ನವಿಲುಗರಿಗಳನ್ನು ಫ್ಯಾನ್ಸಿ ಡ್ರೆಸ್ಗೆ ಬಳಸಿದ್ದನ್ನು, ಪುಸ್ತಕದಡಿ ಇಟ್ಟಿದ್ದನ್ನು ನೋಡಿದ್ದೇನೆ. ಇದು ನೋಡುಗರಿಗೆ ಚಂದ ಎಂದು ನಾನು ಭಾವಿಸಿದ್ದೆ. ಹೀಗಾಗಿ ನವಿಲಿನ ನೃತ್ಯ ಪರಿಕಲ್ಪನೆಯಲ್ಲಿ ಡ್ಯಾನ್ಸ್ ಮಾಡಲು ಉಡುಪನ್ನು ಖರೀದಿ ಮಾಡಲು ನಿರ್ಧರಿಸಿದೆವು. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಹೇಳುತ್ತಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಕಿಶನ್ ವಿಡಿಯೋದಲ್ಲಿ ಏನಿದೆ?
'ನಾನು ಬಾಲ್ಯದಿಂದಲೂ ಅನೇಕ ಕಡೆಗಳಲ್ಲಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ, ಕೃಷ್ಣ ಜನ್ಮಾಷ್ಟಮಿ ಆಚರಣೆಗಳಲ್ಲಿ, ದರ್ಗಾಗಳಲ್ಲಿ ಮತ್ತು ಇನ್ನು ಅನೇಕ ಸ್ಥಳಗಳಲ್ಲಿ ನವಿಲು ಗರಿಗಳ ಬಳಕೆಯನ್ನು ನೋಡಿದ್ದೇನೆ. ಹೀಗಾಗಿ 'ಪೀಕಾಕ್ ಡ್ಯಾನ್ಸ್' ಪರಿಕಲ್ಪನೆ ಮಾಡೋಣ ಎಂದು ಉಡುಪನ್ನು ಖರೀದಿ ಮಾಡಲು ನಿರ್ಧರಿಸಿದೆ. ಸುಲಭವಾಗಿ ಬಾಡಿಗೆಗೆ ಪಡೆಯಬಹುದು ಎಂದು ಭಾವಿಸಿದೆ.
ಕೊಲಾಬರೇಷನ್ ಒಂದರ ಮೂಲಕ ಬಾಡಿಗೆ ನೀಡುವ ವೆಂಡರ್ ಒಬ್ಬರಿಂದ ಈ ಕಾಸ್ಟ್ಯೂಮ್ ಅನ್ನು ಪಡೆಯಲಾಗಿತ್ತು. ಆದರೆ, ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ದಾಖಲಾಗಿ ಕಾನೂನು ಸಮಸ್ಯೆಗಳು ಎದುರಾದಾಗ, ವನ್ಯಜೀವಿ ಸಂರಕ್ಷಣಾ ನಿಯಮಗಳ ಪ್ರಕಾರ ಇಂತಹ ಉಡುಪುಗಳನ್ನು ಬಾಡಿಗೆಗೆ ಪಡೆಯುವುದು ಕೂಡ ತಪ್ಪು ಎಂಬುದು ತಮಗೆ ತಿಳಿಯಿತು
'ನಮಗೆ ಈ ಬಗ್ಗೆ ಯಾವುದೇ ಅರಿವಿರಲಿಲ್ಲ. ಕಾನೂನು ನೋಟಿಸ್ ಜಾರಿಯಾದಾಗ, ಇಡೀ ತಂಡ ನಮಗೆ ತುಂಬಾ ಬೆಂಬಲ ನೀಡಿತು ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅದರ ಪರಿಣಾಮಗಳ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟಿತು. ಈ ವಿಷಯದ ಬಗ್ಗೆ ನಮಗೆ ಶಿಕ್ಷಣ ನೀಡಿದ ಅರಣ್ಯ ಅಧಿಕಾರಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'.
ವಿಡಿಯೋ ಡಿಲೀಟ್ ಮಾಡಿದ್ಯಾಕೆ?
ನಾನೊಬ್ಬ ಇನ್‌ಫ್ಲುಯೆನ್ಸರ್ ಆಗಿರುವುದರಿಂದ ತಪ್ಪು ಕಾರಣಗಳಿಗಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ನವಿಲು ಗರಿಗಳ ಕಾಸ್ಟ್ಯೂಮ್ ಬಾಡಿಗೆಗೆ ಪಡೆಯುವುದು ಕೂಡ ತಪ್ಪು ಎಂದು ತಿಳಿದ ತಕ್ಷಣವೇ ನಾವು ವಿಡಿಯೋವನ್ನು ಡಿಲೀಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಕಿಶನ್, ಪೋಷಕರು ಹಾಗೂ ಕಾರ್ಯಕ್ರಮಗಳ ಆಯೋಜಕರು ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಿಗಾಗಿಯೂ ಇಂತಹ ಉಡುಪುಗಳನ್ನು ಬಾಡಿಗೆಗೆ ಪಡೆಯುವುದನ್ನು ಪ್ರೋತ್ಸಾಹಿಸಬಾರದು. ನಮ್ಮ ಪ್ರಾಣಿಗಳನ್ನು ಮತ್ತು ಕಾಡುಗಳನ್ನು ರಕ್ಷಿಸಲು ನಾವೆಲ್ಲರೂ ಪ್ರಯತ್ನಿಸೋಣ. ನವಿಲು ಗರಿಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಘಟನೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಅಥವಾ ಕಾಸ್ಟ್ಯೂಮ್ ಬಾಡಿಗೆಗೆ ತಂದಿದ್ದು ನನ್ನ ತಪ್ಪು ಎಂದು ಅನಿಸಿದ್ದರೆ, ನಾನು ನಿಜವಾಗಿಯೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ
ಏನಿದು ವಿವಾದ?
ಕಿಶನ್ ಬಿಳಗಲಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ನಿವೇದಿತಾ ಗೌಡ ಧರಿಸಿದ್ದ ಉಡುಪುಗಳಲ್ಲಿ ಅಸಲಿ ನವಿಲು ಗರಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಿಶನ್ ಈ ಸ್ಪಷ್ಟನೆ ನೀಡಿದ್ದಾರೆ, (ಏಜೆನ್ಸೀಸ್).