Kishan Bilagali And Niveditha In Peacock Feather Row 
ರಾಜ್ಯ

ನವಿಲು ಗರಿ ಉಡುಪು ಧರಿಸಿ ರೀಲ್ಸ್; ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತ ಗೌಡ, ಕಿಶನ್ ವಿರುದ್ಧ ದೂರು..Bengaluru

ಪ್ರಮುಖ ಮುಖ್ಯಾಂಶಗಳು

  • ನವಿಲು ಗರಿ ಧರಿಸಿ ರೀಲ್ಸ್​ ಮಾಡಿದ್ದ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ
  • ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯಿಂದ ಇಬ್ಬರ ವಿರುದ್ಧ ದೂರು ದಾಖಲು
  • ನೈಜ ನವಿಲು ಗರಿ ಧರಿಸಿದ ಅನುಮಾನದ ಹಿನ್ನೆಲೆ ತನಿಖೆ ಮಾಡುವಂತೆ ದೂರು
ಬೆಂಗಳೂರು: ಕನ್ನಡದ 'ಹೇ ನವಿಲೇ' ಹಾಡಿಗೆ, ನವಿಲು ಗರಿಯ ಉಡುಪು ತೊಟ್ಟು ರೀಲ್ಸ್​ ಮಾಡಿದ್ದ ನಿವೇದಿತಾ ಗೌಡ ಹಾಗೂ ಕಿಶನ್​ ಬಿಳಗಲಿಗೆ ಸದ್ಯ ಕಾನೂನು ಸಂಕಷ್ಟ ಎದುರಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ದೂರು ನೀಡಿದ್ದಾರೆ.
ಕಿಶನ್​ ಅವರು ತಮ್ಮ ನೃತ್ಯ ಕೌಶಲ್ಯವನ್ನೇ ಮುಂದಿಟ್ಟುಕೊಂಡು ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ನೃತ್ಯದಲ್ಲೇ ರೋಮಾಂಚನಕಾರಿ ಪರಿಕಲ್ಪನೆಗಳನ್ನು ತಂದು ಹೊಸದಾದ ಲೋಕಕ್ಕೆ ಎಳೆದೊಯ್ಯುತ್ತಾರೆ. ಇಂತದ್ದೇ ಒಂದು ಸೋಜಿಗಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ನವಿಲಿನ ಗರಿಗಳುಳ್ಳ ಡ್ರೆಸ್​​ ಧರಿಸಿ, ಹೆಣ್​​ ನವಿಲೇ ಹಾಡಿಗೆ ಬಿಗ್​ಬಾಸ್​​ ಮಾಜಿ ಸ್ಪರ್ಧಿ ನಿವೇದಿತಾ ಗೌಡರೊಂದಿಗೆ ನೃತ್ಯ ಮಾಡಿದ್ದರು. ಸದ್ಯ ಇದರ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.

ನೈಜ ನವಿಲು ಗರಿ ಬಳಕೆ ಮಾಡಿರುವ ಅನುಮಾನ

ಹಂಸಲೇಖ ಸಂಗೀತ ಹಾಗೂ ಸಾಹಿತ್ಯದ ಹಾಡಾದ ಹೆಣ್​ ನವಿಲೇ ಹಾಡಿಗೆ ತಕ್ಕಂತೆ ಕಿಶನ್​ ಅವರು ಪ್ರದೇಶವನ್ನು ಕ್ರಿಯೇಟ್​ ಮಾಡಿದ್ದರು. ನಿವೇದಿತಾ ಗೌಡ ಅವರು ಸಹ ನವಿಲಿನ ಪುಕ್ಕವಿರುವ ಉಡುಪು ಧರಿಸಿದ್ದರು. ಈ ರೀಲ್ಸ್​ ಭಾರಿ ವೈರಲ್​ ಆಗಿತ್ತು. ಆದರೆ, ಇಂತಹ ನೈಜ ನವಿಲು ಗರಿ ಬಳಕೆ ಮಾಡಿಕೊಂಡು ಉಡುಪು ತಯಾರಿಸಿ, ಸಾರ್ವಜನಿಕವಾಗಿ ಹಂಚಿಕೊಳ್ಳುವುದು ವನ್ಯಜೀವಿ(ಸಂರಕ್ಷಣೆ)ಕಾಯ್ದೆ, 1972 ಸ್ಪಷ್ಟ ಉಲ್ಲಂಘನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಗಣೆ ಬಗ್ಗೆ ತನಿಖೆಗೆ ಆಗ್ರಹ

ಅಥವಾ ಕೃತಕ ಗರಿ ಎಂಬುವುದು ವೂಜ್ಞಾನಿಕವಾಗಿ ದೃಢಿಕರಿಸಬೇಕು. ನೈಜ ನವಿಲು ಗರಿ ಹಾಕಿ ನೃತ್ಯ ಮಾಡಿದ್ದರೆ ಅದರ ಮೂಲ, ಸಾಗಣೆ ಬಗ್ಗೆ ತನಿಖೆ ನಡೆಸಬೇಕು. ತನಿಖೆ ವೇಳೆ ಯಾವುದೇ ರಾಜಕೀಯ ಪ್ರಭಾವಕ್ಕೆ ಸಿಲುಕದೆ ಪಾರದರ್ಶಕವಾಗಿ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲೀಪುರ ಅರಣ್ಯ ವಲಯದ ಅಧಿಕಾರಿಗಳಿಗೆ ದೂರುದಾರ ದಿನೇಶ್​ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.

ರೀಲ್ಸ್​ ಡಿಲೀಟ್​?

ಪ್ರಕರಣ ದಾಖಲಾಗಿರುವ ಸುದ್ದಿ ವೈರಲ್​ ಆಗುತ್ತಲೇ ಇನ್​ಸ್ಟಾಗ್ರಾಮ್​ ಸೇರಿದಂತೆ ಯಾವುದೇ ಆನ್​ಲೈನ್​ ಪ್ಲಾಟ್​ಫಾರ್ಮ್​ನಲ್ಲಿ ನವಿಲಿನ ಡ್ಯಾನ್ಸ್​​ ರೀಲ್ಸ್​ ಕಾಣಿಸುತ್ತಿಲ್ಲ. ಅಂದಹಾಗೆ ಇದನ್ನು ತಕ್ಷಣವೇ ಡಿಲೀಟ್ ಮಾಡಿರಬಹುದು ಎನ್ನಲಾಗುತ್ತಿದೆ.

ಹುಲಿ ಉಗರು ಕಂಟಕ

ಈ ಹಿಂದೆ ವರ್ತೂರ್​ ಸಂತೋಷ್ ಅವರು ಬಿಗ್​ಬಾಸ್​ಗೆ ತಮ್ಮ ಚಿನ್ನದ ಪೆಂಡೆಟ್​ ಜೊತೆಗೆ ಹುಲಿ ಉಗುರು ಧರಿಸಿ ಹೋಗಿದ್ದು ಭಾರಿ ಚರ್ಚೆ ವ್ಯಕ್ತವಾಗಿತ್ತು. ಬಿಗ್​ಬಾಸ್​ ಮನೆಯಿಂದಲೇ ಅವರನ್ನು ವಶಕ್ಕೆ ಪಡೆದುಕೊಂಡು ಕೆಲ ದಿನ ವಿಚಾರಣೆಯಲ್ಲಿ ಇರಿಸಲಾಗಿತ್ತು. ಆನಂತರ ಅವರು ಜಾಮೀನಿನ ಮೇಲೆ ರಿಲೀಸ್​ ಆಗಿದ್ದರು. ಇಂತದ್ದೇ ಕೇಸ್​ ಅನ್ನು ಸದ್ಯ ನಿವೇದಿತಾ ಗೌಡ ಹಾಗೂ ಕಿಶನ್​ ಎದುರಿಸುತ್ತಿದ್ದು ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ, (ಏಜೆನ್ಸೀಸ್).