ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಚಿತ್ರ (X)
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ನಿಯಮಿತ ತಪಾಸಣೆಯ ಸಮಯದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ಏನು?
ಆರೋಪಿಯನ್ನು ಮೊಹಮ್ಮದ್ ಅಫಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಆತ ದಕ್ಷಿಣ ಕೊರಿಯಾದ ಮಹಿಳೆಗೆ ಚೆಕ್-ಇನ್ ಲಗೇಜ್ ಮತ್ತು ಟಿಕೆಟ್‌ನಲ್ಲಿನ ಸಮಸ್ಯೆಯನ್ನು ಉಲ್ಲೇಖಿಸಿ ಪರಿಶೀಲನೆಗಾಗಿ ಮಹಿಳೆಯನ್ನು ತಡೆದಿದ್ದಾನೆ. ನಂತರ ಹೆಚ್ಚಿನ ತಪಾಸಣೆಯ ನೆಪದಲ್ಲಿ ಅವರನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದು, ಅನುಚಿತವಾಗಿ ಮಹಿಳೆಯನ್ನು ಮುಟ್ಟಿದ್ದಾರೆ. ತಪಾಸಣೆಯ ವಿಧಾನವನ್ನು ಆಕ್ಷೇಪಿಸಿದರೂ ಸಹ ಸಿಬ್ಬಂದಿ ಶೋಧ ಕಾರ್ಯ ಮುಗಿಸಿ "ಧನ್ಯವಾದಗಳು" ಎಂದು ಹೇಳಿ ಅಲ್ಲಿಂದ ಹೊರಟು ಹೋದರು ಎಂದು ಮಹಿಳೆ ಆರೋಪಿಸಿದ್ದಾರೆ.
ದೂರು ಮತ್ತು ತ್ವರಿತ ಕ್ರಮ
ಈ ಘಟನೆ ನಡೆದ ನಂತರ ಮಹಿಳೆಯು ತನಗಾದ ದೌರ್ಜನ್ಯದ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ ಸಿಬ್ಬಂದಿಯ ಕೃತ್ಯ ಬಯಲಾದ ನಂತರ ಆತನನ್ನು ವಿಮಾನ ನಿಲ್ದಾಣದ ಪೊಲೀಸರು ತಕ್ಷಣ ಬಂಧಿಸಿದ್ದಾರೆ.
ಪೊಲೀಸ್ ಪ್ರಕರಣ ಮತ್ತು ನಡೆಯುತ್ತಿರುವ ತನಿಖೆ
ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಅಫಾನ್ ಅಹ್ಮದ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 75 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖಾಧಿಕಾರಿಗಳು ಅಹ್ಮದ್ ಅವರ ಉದ್ಯೋಗ ಇತಿಹಾಸ, ಸಂಭಾವ್ಯ ಹಿಂದಿನ ದೂರುಗಳು ಮತ್ತು ಇತರರನ್ನು ಇದೇ ರೀತಿ ಗುರಿಯಾಗಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆಯು ವಿಮಾನ ನಿಲ್ದಾಣದ ಭದ್ರತಾ ಪ್ರೋಟೋಕಾಲ್‌ಗಳಲ್ಲಿನ ದುರ್ಬಲತೆಗಳನ್ನು ಎತ್ತಿ ತೋರಿಸಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರನ್ನು ರಕ್ಷಿಸಲು ಶೋಧನಾ ಕಾರ್ಯವಿಧಾನಗಳು ಮತ್ತು ಸಿಬ್ಬಂದಿ ತರಬೇತಿಯನ್ನು ಪರಿಶೀಲಿಸುವಂತೆ ಒತ್ತಾಯಿಸಿದೆ (ಏಜೆನ್ಸೀಸ್).