ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಆನೇಕಲ್‌ನ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ವಸತಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಜಂಟಿಯಾಗಿ ಸೂರ್ಯನಗರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ, ಮುಖ್ಯಮಂತ್ರಿಗಳ ನಮ್ಮ ಮನೆ ಯೋಜನೆಗೆ ಚಾಲನೆ, ಸೂರ್ಯಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಚಯ ಕಾಮಗಾರಿಗಳ ಶಂಕುಸ್ಥಾಪನೆ, ವಸತಿ ಯೋಜನೆಗೆ ಭೂ ಮಾಲೀಕರಿಗೆ ಸಾಂಕೇತಿಕ ನಿವೇಶನ ಹಂಚಿಕೆ ಮಾಡಿ ಮಾತನಾಡಿದ ಅವರು, ಕೇವಲ ಮನೆ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಇದೀಗ 80 ಸಾವಿರ ಆಸನದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಗತಿಯ ಸಂಕೇತ. ಇದಕ್ಕಾಗಿ ಕೆಎಚ್‌ಬಿ ಅಧ್ಯಕ್ಷ, ಶಾಸಕ ಶಿವಲಿಂಗೇಗೌಡ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತ್‌ನಲ್ಲಿರುವ ಕ್ರೀಡಾಂಗಣ 90 ಸಾವಿರ ಆಸನ ವ್ಯವಸ್ಥೆ ಇದೆ. ಇದು 2ನೇ ಅತೀ ದೊಡ್ಡ ಕ್ರೀಡಾಂಗಣವಾಗಲಿದೆ. ಇದರಿಂದ ಪ್ರವಾಸೋದ್ಯಮದ ಜತೆಗೆ ಸುತ್ತಮುತ್ತಲ ಊರುಗಳ ಆರ್ಥಿಕತೆಯೂ ಹೆಚ್ಚುತ್ತದೆ. ಉದ್ಯೋಗವೂ ಹೆಚ್ಚುತ್ತದೆ. ಸರ್ಕಾರದ ಆರ್ಥಿಕ ನೆರವಿಲ್ಲದೆ ಕೆಎಚ್‌ಬಿ ಹಣದಿಂದಲೇ ಕ್ರೀಡಾಂಗಣ ನಿರ್ಮಾಣ ಆಗಲಿದೆ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡರು ಹೇಳಿದ್ದಾರೆ. ಆದ್ದರಿಂದ ಕೆಎಚ್‌ಬಿಯಲ್ಲಿ ಉಳಿದಿರುವ ಸೈಟುಗಳನ್ನು ಹರಾಜು ಮಾಡಿದರೆ ಅಂದಾಜು 20 ಸಾವಿರ ಕೋಟಿ ರೂ. ಆದಾಯ ಬರುವ ಸಾಧ್ಯತೆ ಇದೆ. ಇದಕ್ಕೂ ಕೆಎಚ್‌ಬಿಗೆ ಅನುಮತಿ ನೀಡಿದ್ದೇನೆ. ಇದೇ ಹಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ನಿರ್ಮಾಣಕ್ಕೂ 9 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಧಿಕಾರಿಗಳು ಕೆಲಸ ಶುರು ಮಾಡಬಹುದು. ಕ್ರೀಡಾಂಗಣ, ರಸ್ತೆ ಮಾತ್ರವಲ್ಲದೆ ವಸತಿ ಇಲಾಖೆ ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನೂ ರಾಜ್ಯದಲ್ಲಿ ಹಂಚಿಕೆ ಮಾಡಿದೆ. ಹೀಗಾಗಿ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿಗೆ ನಾವು ನಾಂದಿ ಹಾಡಿದ್ದೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.