ಶಹಾಪುರ ರಸ್ತೆ ಖಾನಾಪುರ ಕ್ರಾಸ್ನಲ್ಲಿ ಬಸ್ಗಾಗಿ ಕಾಯುತ್ತಿರುವ ಪ್ರಯಾಣಿಕರು ಮತ್ತು ಶಾಲಾ ಮಕ್ಕಳು
- ಸಾವಿರಾರು ಪ್ರಯಾಣಿಕರ ನಿತ್ಯದ ಪರದಾಟ
- ನಾನ್ ಸ್ಟಾಪ್ ಎಂದು ಹಾಗೇ ಹೋಗುವ ಬಸ್ಗಳು
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಹಾಪುರ ರಸ್ತೆಯ ಖಾನಾಪುರ ಕ್ರಾಸ್ನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಕೆಕೆಆರ್ಟಿಸಿ)ದ ಬಹುತೇಕ ಬಸ್ಗಳು ನಿಲ್ಲದ ಕಾರಣ ನಿತ್ಯ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಯಾದಗಿರಿಯಿಂದ ಶಹಾಪುರ ಮತ್ತು ಶಹಾಪುರದಿಂದ ಯಾದಗಿರಿಗೆ ಸಂಚರಿಸುವ ಬಹುತೇಕ ಬಸ್ಗಳು ಈ ಕ್ರಾಸ್ನಲ್ಲಿ ನಿಲ್ಲಿಸದ್ದರಿಂದ ಮಕ್ಕಳು, ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು , ಸರ್ಕಾರಿ ನೌಕರರು, ರೋಗಿಗಳು ಹೀಗೆ ಪ್ರತಿದಿನ ಐದಾರು ಸಾವಿರ ಜನರು ಭಾರಿ ತೊಂದರೆಗೆ ಸಿಲುಕಿದ್ದಾರೆ.
ನಾನ್ ಸ್ಟಾಪ್ ಎಂಬ ನೆಪ ಹೇಳಿ ನಿಲ್ಲಿಸದೆ ಬಸ್ಗಳು ಹಾಗೇ ಹೋದರೆ, ಸ್ಥಳಿಯವಾಗಿ ಎಲ್ಲೆಡೆ ನಿಲುಗಡೆ ಮಾಡುವ ಬಸ್ಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಹತ್ತಾರು ಹಳ್ಳಿಗಳ ಪ್ರಯಾಣಿಕರು ಇನ್ನಿಲ್ಲದ ಸಾರಿಗೆ ಸಂಕಷ್ಟ ಎದುರಿಸುತ್ತಿದ್ದಾರೆ.
ಖಾನಾಪುರ, ತಡಿಬಿಡಿ, ಹುಂಡೆಕಲ್ಲ, ಗುಂಡಗುರ್ತಿ, ಖ್ಯಾತನಾಳ, ಕುರಕುಂದಾ, ಕಾಡಂನೋರ, ಗುಂಡಳ್ಳಿ, ಗುಂಡಳ್ಳಿ ತಾಂಡಾ ಹೀಗೆ ಹತ್ತಾರು ಊರುಗಳ ಸಾವಿರಾರು ಪ್ರಯಾಣಿಕರು ಒಂದೆರಡು ವರ್ಷಗಳಿಂದ ಪರದಾಡುತ್ತಿದ್ದರೂ ಕೆಕೆಆರ್ಟಿಸಿ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬ ಆರೋಪ ಜನರದು. ಲೋಕಲ್ ಬಸ್ಗಳು ಕಡಿಮೆ ಮತ್ತು ಸಮಯಕ್ಕೆ ಸರಿಯಾಗಿ ಬಾರದ್ದರಿಂದ ಮೂರ್ನಾಲ್ಕು ತಾಸು ಖಾನಾಪುರ ಕ್ರಾಸ್ ಬಳಿ ಪ್ರಯಾಣಿಕರು ಬಿಸಿಲು, ಮಳೆ&ಚಳಿ ಎನ್ನದೆ ಕಾಯುವಂಥ ಅನಿವಾರ್ಯ ಸ್ಥಿತಿ ಇದೆ.
ರಾಜ್ಯ ಹೆದ್ದಾರಿಯ ಈ ರಸ್ತೆ ಅಂತರ ಜಿಲ್ಲಾ ಮತ್ತು ಅಂತಾರಾಜ್ಯಗಳಿಗೆ ಸಂಪರ್ಕಿಸುವ ಪ್ರಮುಖ ದಾರಿಯಾಗಿದ್ದು, ನಿತ್ಯ 500ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತವೆ. ಅದರಲ್ಲಿ ಶೇ.95 ಬಸ್ಗಳು ಇಲ್ಲಿ ನಿಲ್ಲುವುದೇ ಇಲ್ಲ. ಶಹಾಪುರ, ಜೇವರ್ಗಿ, ಸಿಂದಗಿ, ಸುರಪುರ, ವಿಜಯಪುರ, ಬಾಗಲಕೋಟ, ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ, ಬೆಳಗಾವಿ ಹೀಗೆ ದೂರದ ಊರುಗಳಿಗೆ ಹೋಗಿ ಬರಲು ಖಾನಾಪುರ ಕ್ರಾಸ್ ಕೇಂದ್ರ ಸ್ಥಾನಯಾಗಿದೆ. ಆದರೂ ಹಳ್ಳಿ ಜನರಿಗೆ ಸಕಾಲಕ್ಕೆ ಸಾರಿಗೆ ಸೌಕರ್ಯ ಇಲ್ಲವೆಂದರೆ ಏನು ಮಾಡುವುದು ಮತ್ತು ಯಾರಿಗೆ ಹೇಳಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ಗೊಂದಲದ ಪ್ರಶ್ನೆ ಪ್ರಯಾಣಿಕರನ್ನು ಕಾಡುತ್ತಿದೆ.
ಈ ವಿಷಯವನ್ನು ಕೆಕೆಆರ್ಟಿಸಿ ಮುಖ್ಯಸ್ಥರ ಗಮನಕ್ಕೆ ತಂದಿದ್ದಾಗ ನಾಳೆಯೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿ ಅನೇಕ ತಿಂಗಳು ಕಳೆದಿದೆ. ಆದರೂ ಸೂಕ್ತ ಕ್ರಮ ಜರುಗಿಸದ್ದರಿಂದ ನಿತ್ಯ ಸಾವಿರಾರು ಜನ ಅದರಲ್ಲೂ ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ತುಂಬ ತೊಂದರೆಯಾಗುತ್ತಿದೆ ಎಂಬ ತಡಿಬಿಡಿ ಗ್ರಾಮದ ಶರಣರೆಡ್ಡಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಳ್ಳಿ ಜನ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಕ್ರಾಸ್ನಲ್ಲಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವುದು ಒಳಿತು.
"
ಈ ಸಮಸ್ಯೆ ಬಗ್ಗೆ ಖಾನಾಪುರ, ದೋರನಹಳ್ಳಿ ಜನರು ಅನೇಕ ಸಲ ತಮ್ಮ ಗಮನಕ್ಕೆ ತಂದಿದ್ದು, ಕೆಕೆಆರ್ಟಿಸಿ ಎಂಡಿಗೆ ತಿಳಿಸಿದ್ದೆ. ಕೂಡಲೇ ಸಾರಿಗೆ ಇಲಾಖೆ ಜಿಲ್ಲಾ ನಿಯಂತ್ರಣಾಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಖಾನಾಪುರ ಕ್ರಾಸ್ನಲ್ಲಿ ಸಂಚಾರ ಬಂದ್ ಮಾಡಿ ಹೋರಾಟ ನಡೆಸಲಾಗುವುದು.
— > ಮಹೇಶರಡ್ಡಿ ಮುದ್ನಾಳ್ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ, ಯಾದಗಿರಿ
"
ಯಾವುದೇ ಊರಿನ ಪ್ರಯಾಣಿಕರಿಗೂ ಅನಾನುಕೂಲವಾಗಬಾರದು. ಖಾನಾಪುರ ಕ್ರಾಸ್ನಲ್ಲಿ ಹೆಚ್ಚು ಮತ್ತು ನಿಗದಿತ ವೇಳೆಗೆ ಬಸ್ ನಿಲ್ಲುವಂತಹ ವ್ಯವಸ್ಥೆ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವೆ.
— > ಅರುಣಕುಮಾರ ಪಾಟೀಲ್ ಅಧ್ಯಕ್ಷ, ಕೆಕೆಆರ್ಟಿಸಿ