ವಿಜಯಪುರ ಪೊಲೀಸ್​ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಚಂದ್ರಕಾಂತ್​, ಅಪರ ಪೊಲೀಸ್​ ಅಧೀಕ್ಷಕರಾದ ವೆಂಕಟೇಶ್​ ಪ್ರಸನ್ನ, ಲಕ್ಷಿ$್ಮನಾರಾಯಣ್​ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಎಸ್​.ಪಾಂಡುರಂಗ ಉಪಸ್ಥಿತರಿದ್ದರು. 
ರಾಜ್ಯ

ಖದೀಮರ ಹೆಡೆಮುರಿ ಕಟ್ಟಿದ ಖಾಕಿ! / VIJAYAPUR

ವಿಜಯಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಸರಣಿ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಖಾಕಿ ಪಡೆ ಯಶಸ್ವಿಯಾಗಿದ್ದು, ಕೊಲೆ ಆರೋಪಿಗಳು, ಬೈಕ್​, ಸರ ಹಾಗೂ ಮನೆಗಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್​ ತಿಳಿಸಿದರು.
ಜೂ.6ರಂದು ಸೂಲಿಬೆಲೆಯಲ್ಲಿ ನಡೆದಿದ್ದ ಕಲೀಮ್​ ಉಲ್ಲಾ ಖಾನ್​ (38) ಎಂಬಾತನ ಭೀಕರ ಕೊಲೆ ಪ್ರಕರಣವನ್ನು ಹೊಸಕೋಟೆ ಹಾಗೂ ಸೂಲಿಬೆಲೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್​ ಬೇಗ್​, ಇಮ್ರಾನ್​ ಬೇಗ್​ (ಆಲಿಯಾಸ್​ ಸಿಮ್ಮು), ಇಮ್ರಾನ್​ ಬೇಗ್​ (ಆಲಿಯಾಸ್​ ಅಡ್ಡು), ಆಯಾಸ್​ ಪಾಶ ಹಾಗೂ ಅಬ್ದುಲ್​ ಕಲೀಲ್​ ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳಾದ ಶಂಶೀರ್​ ಬೇಗ್​ ಹಾಗೂ ಸಾಕೀಬ್​ ಬೇಗ್​ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪಟ್ಟಣದ ಪೊಲೀಸ್​ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಾಹಿತಿ ಹಂಚಿಕೊಂಡರು.
ಕೊಲೆಗೆ ಕಾರಣವೇನು?: ಕೊಲೆಯಾದ ಕಲೀಮ್​ ಉಲ್ಲಾ ಖಾನ್​ ಹಳೇ ರೌಡಿಶೀಟರ್​ ಆಗಿದ್ದು, ಪೊಲೀಸರಿಗೆ ಮಾಹಿತಿದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಆತ ಹಲವು ಕಾನೂನು ವಿರೋಧಿ ಚಟುವಟಿಕೆಗಳನ್ನು ಪತ್ತೆ ಹಚ್ಚಿ, ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೆದರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ. ಹಣ ವಸೂಲಿ ಮಾಡುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ಆತನ ವಿರೋಧಿಗಳು ಹೊಂಚು ಹಾಕಿ ಕೃತ್ಯ ಎಸಗಿದ್ದಾರೆ. ಹೊಸಕೋಟೆ ಡಿವೈಎಸ್ಪಿ ಮಲ್ಲೇಶ್​ ಹಾಗೂ ಸೂಲಿಬೆಲೆ ಪಿಎಸ್​ಐ ರಾಜಣ್ಣ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ಎಸ್ಪಿ ಚಂದ್ರಕಾಂತ್​ ತಿಳಿಸಿದರು.
ನಾಲ್ವರು ಕಳ್ಳರ ಬಂಧನ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಜೂನ್​ 22ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಇಬ್ಬರು ಸರಗಳ್ಳರನ್ನು ಹೆಡೆಮುರಿ ಕಟ್ಟಿ, 14 ಗ್ರಾಂ ಚಿನ್ನದ ಸರ, ಸ್ಕೂಟಿ, ಹಾಗೆಯೇ ಇನ್ನೊಂದು ಮನೆ ಕಳ್ಳತನ ಪ್ರಕರಣದಲ್ಲಿ ಬಿಹಾರ ಮೂಲದ ಇಬ್ಬರನ್ನು ಬಂಧಿಸಿ, 85 ಗ್ರಾಂ ಚಿನ್ನಾಭರಣ, 67 ಸಾವಿರ ನಗದು, ಬೈಕ್​ಅನ್ನು ಜಪ್ತಿ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಒಂದೇ ಕಂಪನಿಯ 42 ಬೈಕ್​ ವಶ: ಅಂತರ್​ ಜಿಲ್ಲಾ ಬೈಕ್​ ಕಳ್ಳನನ್ನು ವಿಜಯಪುರ ಪೊಲೀಸರು ಬಂಧಿಸಿ, ಒಂದೇ ಕಂಪನಿಯ 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೌಲ್ಯ 20 ಲಕ್ಷ ರೂ. ಎಂದು ಎಸ್ಪಿ ಎಂ.ವಿ.ಚಂದ್ರಕಾಂತ್​ ತಿಳಿಸಿದರು. ವಶಪಡಿಸಿಕೊಂಡ ಬೈಕ್​ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿ ಮಾತನಾಡಿದ ಎಸ್ಪಿ, ಮನೆಗಳ ಮುಂಭಾಗ,ಸಾರ್ವಜನಿಕ ಪಾರ್ಕಿಂಗ್​ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಿಜಯಪುರದ ಮಂಡಿಬಲೆ ರಸ್ತೆ, ಇಸ್ಲಾಂ ನಗರದ ಖಲೀಲ್​ ಅಹ್ಮದ್​ (46) ಅಲಿಯಾಸ್​ ಶಫಿವುಲ್ಲಾ ಕದಿಯುತ್ತಿದ್ದ. ಈತ ಈ ಹಿಂದೆ ಪೆಟ್ರೋಲ್​ ಬಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಜೀವನ ನಿರ್ವಹಣೆ, ಕಷ್ಟವಾದಾಗ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಬೈಕ್​ ಕಳ್ಳತನ ವೃತ್ತಿಗೆ ಇಳಿದಿದ್ದಾನೆ ಎಂದು ತಿಳಿಸಿದರು.
25 ಮಾಸ್ಟರ್​ ಕೀ ಬಳಸಿ ಕಳವು : ಕಲೀಲ್​ ಸುಮಾರು 20ರಿಂದ 25 ಮಾಸ್ಟರ್​ ಕೀಗಳನ್ನು ಬಳಸಿ ಕ್ಷಣಾರ್ಧದಲ್ಲಿ ಬೈಕ್​ ಕದಿಯುತ್ತಿದ್ದ. ಹೆಚ್ಚಾಗಿ ಮೈಲೇಜ್​ ಬರುವ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ, ಅಂಥ ಕಂಪನಿಯ ಬೈಕ್​ಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ. ಕದ್ದ ಬೈಕ್​ಗಳನ್ನು ಕೇವಲ 2,000ದಿಂದ 2,500 ರೂ.ಗೆ ಮಾರುತ್ತಿದ್ದ. ಈತನ ಕೃತ್ಯಕ್ಕೆ ಸಹಕರಿಸುತ್ತಿದ್ದ ಐದಾರು ಮಂದಿ ದಲ್ಲಾಳಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಕಳವು ಬಯಲಾಗಿದ್ದು ಹೇಗೆ? : ಜೂ.16ರಂದು ಪಿ.ಮುನಿಕೃಷ್ಣ ಎಂಬುವವರು ಬೈಕ್​ ಅನ್ನು ವಿಜಯಪುರ ಬಸ್​ ನಿಲ್ದಾಣದ ರೇಷ್ಮೆ ಗೂಡಿನ ಮಾರುಕಟ್ಟೆ ಎದುರು ನಿಲ್ಲಿಸಿ ಯಲಹಂಕಕ್ಕೆ ಹೋಗಿದ್ದರು. ಸಂಜೆ ವಾಪಸ್​ ಬರುವಷ್ಟರಲ್ಲಿ ಬೈಕ್​ ಕಳುವಾಗಿತ್ತು. ಈ ಕುರಿತು ಜೂ.18ರಂದು ವಿಜಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವೃತ್ತ ನಿರೀಕ್ಷಕ ಲಕ್ಷಿ$್ಮನಾರಾಯಣ್​ ನೇತೃತ್ವದಲ್ಲಿ ವಿಶೇಷ ತಂಡ ಜೂ.19ರಂದು ಆರೋಪಿ ಕಲೀಲ್​ ಅಹ್ಮದ್​ನನ್ನು ಬೈಕ್​ ಸಮೇತ ವಶಕ್ಕೆ ಪಡೆದು, 5 ದಿನ ವಿಚಾರಣೆ ನಡೆಸಿದಾಗ ಕಳ್ಳತನದ ಕೃತ್ಯಗಳು ಬಯಲಾಗಿವೆ. ಆರೋಪಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನಂದಗುಡಿ, ಹೊಸಕೋಟೆ, ಸೂಲಿಬೆಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ, ಶಿಡ್ಲಘಟ್ಟ, ಎಚ್​.ಕ್ರಾಸ್​ ಹಾಗೂ ಕೋಲಾರ ಜಿಲ್ಲೆಯ ಮಾಸ್ತಿ, ಮಾಲೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲಾಗಿದ್ದ ಒಟ್ಟು 42 ಬೈಕ್​ಗಳನ್ನು ಜಪ್ತಿ ಮಾಡಲಾಗಿದೆ.
ನಗದು ಬಹುಮಾನ : ಬೈಕ್​ ಕಳ್ಳನ ಸೆರೆ ಕಾರ್ಯಚರಣೆ ಕೈಗೊಂಡಿದ್ದ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್​, ಪಿಎಸ್​ಐ ಸುನೀಲ್​ ಕುಮಾರ್​, ಶಿವಪ್ರಸಾದ್​, ಎಎಸ್​ಐಗಳಾದ ಚಂದ್ರಪ್ಪ, ನಾಗರಾಜು, ಮುಕ್ತಿಯರ್​ ಹಾಗೂ ಸಿಬ್ಬಂದಿ ಮಧುಕುಮಾರ್​, ರಾಮಾಂಜಿ, ಅಶ್ವತ್ಥರೆಡ್ಡಿ, ಮಲ್ಲಪ್ಪ, ರಮೇಶ್​, ಪ್ರವಿಣ್​ ತಂಡಕ್ಕೆ ಎಸ್ಪಿ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಘೋಷಿಸಿದರು.