ನಾಪತ್ತೆಯಾಗಿರುವ ಮಹಿಳೆ ಶರಣ್ಯ (36)
- ಏಕಾಂಗಿಯಾಗಿ ಚಾರಣಕ್ಕೆ ಹೋದ ಕೇರಳ ಮೂಲದ ಮಹಿಳೆ ನಾಪತ್ತೆ
- ಮಡಿಕೇರಿಯ ತಡಿಯಾಂಡಮೋಲ್ ಚಾರಣಕ್ಕೆ ತೆರಳಿದ್ದಾಗ ಘಟನೆ
- 48 ಗಂಟೆಗಳು ಕಳೆದರೂ ಸಣ್ಣ ಸುಳಿವು ಸಿಕ್ಕಿಲ್ಲ
ಕೊಡಗು: ಗುರುವಾರ (ಏ.02) ಮಡಿಕೇರಿಯ ತಡಿಯಾಂಡಮೋಲ್ ಚಾರಣಕ್ಕೆ ಏಕಾಂಗಿಯಾಗಿ ತೆರಳಿದ್ದ ಕೇರಳ ಮೂಲದ ಶರಣ್ಯ (36) ನಾಪತ್ತೆಯಾಗಿದ್ದು, 48 ಗಂಟೆಗಳು ಕಳೆದರೂ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.
ಕೇರಳದ ಕಣ್ಣೂರಿನ ಶರಣ್ಯ, ಕೊಡಗು ಜಿಲ್ಲೆಯಲ್ಲಿ ಚಾರಣ ಮಾಡಲು ಏಕಾಂಗಿಯಾಗಿ ಬಂದಿದ್ದರು ಎನ್ನಲಾಗಿದೆ. ವೃತ್ತಿಯಲ್ಲಿ ಸಾಫ್ಟ್ವೇರ್ ಟೆಕ್ಕಿ ಆಗಿರುವ ಅವರು, ಹೋಮ್ಸ್ಟೇಯಲ್ಲಿ ಉಳಿದು, ಮರುದಿನ ಅಲ್ಲಿಂದ ತಡಿಯಾಂಡಮೋಲ್‌ಗೆ ಚಾರಣಕ್ಕೆ ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿರುವ ಪೊಲೀಸರು, ಫೂಟೇಜ್ಗಳನ್ನು ಪರಿಶೀಲಿಸಿ ನೋಡಿದಾಗ, ಟ್ರೆಕ್ಕಿಂಗ್ನ ಎಂಟ್ರಿ ಗೇಟ್ನಲ್ಲಿ ಆಕೆ ಹೋಗಿರುವುದು ಕಾಣಿಸಿದೆ. ಆದರೆ, ಹಿಂತಿರುಗಿವ ಒಂದೇ ಒಂದು ದೃಶ್ಯ ಕೂಡ ಲಭ್ಯವಿಲ್ಲ.
ಕಣ್ಮರೆಯಾಗುವ ಮೊದಲು ಶರಣ್ಯ ಫೋನ್ ಕಾಲ್ ಮಾಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ದಿನಗಳಿಂದ ನಿರಂತರವಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಇಲ್ಲಿಯವರೆಗೆ ಆಕೆಯ ಬಗ್ಗೆ ಯಾವುದೇ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅಧಿಕಾರಿಗಳು ಅರಣ್ಯ, ಪರ್ಯಾಯ ದಾರಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ,(ಏಜೆನ್ಸೀಸ್).