ಕೇರಳ ಮೂಲದ ಟೆಕ್ಕಿ ಶರಣ್ಯ  
ರಾಜ್ಯ

ತಡಿಯಂಡಮೋಳ್ ಬೆಟ್ಟದಲ್ಲಿ 4 ದಿನಗಳ ಸತತ ಹುಡುಕಾಟ ಯಶಸ್ವಿ! ಕಡೆಗೂ ಪತ್ತೆಯಾದ ಕೇರಳದ ಟೆಕ್ಕಿ ಶರಣ್ಯ

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಏಕಾಂಗಿಯಾಗಿ ಚಾರಣಕ್ಕೆ ಹೋದ ಕೇರಳ ಟೆಕ್ಕಿಯ ನಾಪತ್ತೆ ಪ್ರಕರಣ
  • ಮಡಿಕೇರಿಯ ತಡಿಯಾಂಡಮೋಲ್‌ ಚಾರಣಕ್ಕೆ ತೆರಳಿದ್ದಾಗ ಘಟನೆ
  • 4 ದಿನಗಳ ನಿರಂತರ ಹುಡುಕಾಟದ ಬಳಿಕ ಮಹಿಳೆಯ ಸುಳಿವು
ಕೊಡಗು: ಗುರುವಾರ (ಏ.02) ಮಡಿಕೇರಿಯ ತಡಿಯಾಂಡಮೋಲ್‌ ಚಾರಣಕ್ಕೆ ಏಕಾಂಗಿಯಾಗಿ ತೆರಳಿದ್ದ ಕೇರಳ ಮೂಲದ ಶರಣ್ಯ (36) ನಾಪತ್ತೆಯಾಗಿದ್ದರು. ಇದೀಗ ಸತತ ನಾಲ್ಕು ದಿನಗಳ ನಿರಂತರ ಹುಡುಕಾಟದ ಬಳಿಕ ಮಹಿಳೆಯ ಸುಳಿವು ಸಿಕ್ಕಿದೆ.
ಸ್ಥಳೀಯ ಕುಡಿಯ ಸಮುದಾಯದ ಶೋಧ ಕಾರ್ಯದ ವೇಳೆ ಶರಣ್ಯ ಪತ್ತೆಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವುದಾಗಿ ಗುರುವಾರ ಬೆಳಗ್ಗೆ ಹೋದ ಮಹಿಳೆ, ವಾಪಾಸ್​ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು, ಮಗಳ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು.
ಅರಣ್ಯ, ಪೊಲೀಸ್, ಇಲಾಖೆ, ಗ್ರಾಮಸ್ಥರು ಮತ್ತು ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ಬೆನ್ನಲ್ಲೇ ಟೆಕ್ಕಿಯ ಸುಳಿವು ಸಿಕ್ಕಿದೆ. ಭಾನುವಾರ (ಏ.05) ಶರಣ್ಯ ಪತ್ತೆಯಾಗಿದ್ದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಕೆ ಎಲ್ಲಿದ್ದರು? ಮಿಸ್​ ಆಗಿದ್ದು ಹೇಗೆ? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಏನಿದು ಮಿಸ್ಸಿಂಗ್ ಕೇಸ್​?

ಕೇರಳದ ಕಣ್ಣೂರಿನ ಶರಣ್ಯ, ಗುರುವಾರ (ಏ.02) ಕೊಡಗು ಜಿಲ್ಲೆಯಲ್ಲಿ ಚಾರಣ ಮಾಡಲು ಏಕಾಂಗಿಯಾಗಿ ಬಂದಿದ್ದರು ಎನ್ನಲಾಗಿದೆ. ವೃತ್ತಿಯಲ್ಲಿ ಸಾಫ್ಟ್​ವೇರ್​ ಟೆಕ್ಕಿ ಆಗಿರುವ ಅವರು, ಹೋಮ್​ಸ್ಟೇಯಲ್ಲಿ ಉಳಿದು, ಮರುದಿನ ಅಲ್ಲಿಂದ ತಡಿಯಾಂಡಮೋಲ್‌ಗೆ ಚಾರಣಕ್ಕೆ ಹೋಗಿದ್ದರು. ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ ಪೊಲೀಸರು, ಫೂಟೇಜ್​ಗಳನ್ನು ಪರಿಶೀಲಿಸಿ ನೋಡಿದಾಗ, ಟ್ರೆಕ್ಕಿಂಗ್​ನ ಎಂಟ್ರಿ ಗೇಟ್​ನಲ್ಲಿ ಆಕೆ ಹೋಗಿರುವುದು ಕಾಣಿಸಿದೆ. ಆದರೆ, ಹಿಂತಿರುಗುವ ಒಂದೇ ಒಂದು ದೃಶ್ಯ ಕೂಡ ಲಭ್ಯವಿರಲಿಲ್ಲ.
ಕಣ್ಮರೆಯಾಗುವ ಮೊದಲು ಶರಣ್ಯ ಫೋನ್ ಕಾಲ್​ ಮಾಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಎರಡು ದಿನಗಳಿಂದ ನಿರಂತರವಾಗಿ ಹುಡುಕಾಡಿದರೂ ಆಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಭಾನುವಾರ ಮಹಿಳೆ ಪತ್ತೆಯಾಗಿದ್ದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).