Kempegowda Jayanti celebration on the 27th 
ರಾಜ್ಯ

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಿ

ವಿಜಯವಾಣಿ ಸುದ್ದಿಜಾಲ ಪಾವಗಡ
ದುಶ್ಚಟ ವ್ಯಕ್ತಿಯ ಜೀವನವನ್ನಲ್ಲದೆ ಕುಟುಂಬ ಮತ್ತು ಸಮಾಜದ ಶಾಂತಿ ಹಾಳು ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ನಗರ ವೃತ್ತ ನಿರೀಕ ಕೆ.ಸುರೇಶ್​ ತಿಳಿಸಿದರು.
ಪಟ್ಟಣದ ಎಸ್​ಎಸ್​ಕೆ ಬಯಲು ರಂಗಮಂದಿರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾಂತಿ ಪಿಯು ಕಾಲೇಜು ಹಾಗೂ ಪೊಲೀಸ್​ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಪೀಳಿಗೆ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೊಬೈಲ್​ ಬಳಕೆ ಹೆಚ್ಚಾಗುತ್ತಿದ್ದು, ಇದು ಸಹ ಒಂದು ರೀತಿಯ ಚಟವಾಗಿ ಪರಿಣಮಿಸಿದೆ. ಪ್ರಸ್ತುತ ದಿನಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ಅಪರಾಧ ಮತ್ತು ಕಾನೂನು ಬಾಹಿರ ದೃಶ್ಯಗಳನ್ನು ವೈಭವಿಕರಿಸಲಾಗುತ್ತಿದ್ದು, ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದರು.
ಗ್ರಾಮಾಂತರ ವೃತ್ತ ನಿರೀಕ ಕೊಟ್ರೇಶ್​ ಮಾತನಾಡಿ, ದುಶ್ಚಟಗಳು ಮೊದಲಿಗೆ ಸ್ನೇಹಿತನ ಬಲವಂತದಿಂದ ಶುರುವಾಗಿ ಕ್ರಮೇಣವಾಗಿ ನಿಮ್ಮನ್ನು ದಾಸನಾಗಿ, ಕಳ್ಳನಾಗಿ, ದರೋಡೆಕೋರನನ್ನಾಗಿ ಸೆಳೆಯುತ್ತದೆ. ಹಾಗಾಗಿ ಅಂತಹ ಚಟಗಳಿರುವವರಿಂದ ದೂರವಿದ್ದರೆ ಸಾಕು. ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಪರಾಧಗಳನ್ನು ತಡೆಯಬಹುದಾಗಿದೆ ಎಂದರು.
ಎಸ್​ಎಸ್​ಕೆ ಬಯಲು ರಂಗಮಂದಿರದಿಂದ ಶನಿಮಹಾತ್ಮ ವೃತ್ತ, ಅಂಬೇಡ್ಕರ್​ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಸಿಬ್ಬಂದಿ ದೀಪಕ್​, ಗೋಪಿ, ಶ್ರೀನಿವಾಸ್​, ವೆಂಕಟೇಶ್​ ನಾಯ್ಕ, ಸಂಜೀವ್​ ಕುಮಾರ್​, ನಟೇಶ್​ ಇದ್ದರು.
25 ಪಿವಿಡಿ 01
ಪಾವಗಡ ತಾಲೂಕಿನ ಎಸ್​ಎಸ್​ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಶಾ ಮುಕ್ತ ಜಾಗೃತಿ ಕಾರ್ಯಕ್ರಮದಲ್ಲಿ ಎಸ್​ಎಸ್​ಕೆ ಕಾಲೇಜಿನ ಪ್ರಾಂಶುಪಾಲ ಮನೋಜ್​ ಕುಮಾರ್​, ಪೊಲೀಸ್​ ಠಾಣೆಯ ಪಿಎಸ್​ಐ ಗಳಾದ ಮುತ್ತುರಾಜು, ಮಹಮದ್​, ಶಿವಪ್ಪ ಇದ್ದರು.