ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ, ಉತ್ತರಾದೇವಿ ಇತರರಿದ್ದರು.
- ಪ್ರಾಚಾರ್ಯ ಗುರಪ್ಪಾಚಾರ್ಯ ಬಣ್ಣನೆ
- ಯಾದಗಿರಿಯಲ್ಲಿ ಜಯಂತಿ ಆಚರಣೆ
ಯಾದಗಿರಿ: ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಕ್ಕಾಗಿ ಕೆಂಪಾಂಬುಧಿ ಸೇರಿ ವಿವಿಧೆಡೆ ಸುಮಾರು 1000ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸುವ ಮೂಲಕ ನಾಡಪ್ರಭು ಕೆಂಪೆಗೌಡರ ಆಧುನಿಕ ಭಗೀರಥರಾಗಿದ್ದಾರೆ ಎಂದು ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಾಡಪ್ರಭು ಕೆಂಪೇಗೌಡರವರ ಜಯಂತ್ಯೋತ್ಸವ ಸಮಿತಿ ಮತ್ತು ವಿವಿಧ ಸಂ ಸಂಸ್ಥೆಗಳಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಕುಡಿಯುವ ನೀರು ಸೇರಿ ಕೃಷಿಗೆ ನೀರು ಒದಗಿಸಿದ್ದಾರೆ ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ದೂರದೃಷ್ಟಿಯ ಆಡಳಿತಗಾರ ಮತ್ತು ಬೆಂಗಳೂರು ನಗರದ ನಿರ್ಮಾತೃವಾಗಿದ್ದಾರೆ. ಕೆಂಪೆಗೌಡ ಅವರ ಆಡಳಿತ, ಸಮಾಜ ಸುಧಾರಣೆ ಮತ್ತು ನಗರ ನಿರ್ಮಾಣದ ಸಾಧನೆಗಳು ಇಂದಿಗೂ ಸ್ಮರಣೀಯವಾಗಿವೆ. ವಿಜಯ ನಗರದ ಅಚ್ಯುತರಾಯರ ಕಾಲದಲ್ಲಿ ಪಟ್ಟಾಭಿಷಿಕ್ತರಾದ ಅವರು, ಸುಮಾರು 56ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ ಧಿಮಂತರಾಗಿದ್ದಾರೆ. 1537ರಲ್ಲಿ ಅಚ್ಯುತರಾಯರ ಅನುಮತಿ ಪಡೆದು, ಮಣ್ಣಿನ ಕೋಟೆ ಮತ್ತು ಬೆಂಗಳೂರು ಪೇಟೆಯನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿದರು. ವಿಶಾಲವಾದ ರಸ್ತೆಗಳು, ವ್ಯವಸ್ಥಿತ ಮಾರುಕಟ್ಟೆಗಳು ಮತ್ತು ನಾಲ್ಕು ದಿಕ್ಕುಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಿಸುವ ಮೂಲಕ ಅತ್ಯುತ್ತಮ ನಗರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಕೃಷಿ ಮತ್ತು ಕುಡಿವ ನೀರಿನ ಅಗತ್ಯಕ್ಕಾಗಿ ಕೆಂಪಾಂಬುಧಿ ಸೇರಿ ವಿವಿಧೆಡೆ ಸುಮಾರು 1000ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಕೆರೆಗಳಂ ಕಟ್ಟು, ಮರಗಳಂ ನೆಡು (ಕೆರೆಗಳನ್ನು ನಿರ್ಮಿಸಿ, ಮರಗಳನ್ನು ನೆಡಿ) ಎಂಬ ಮಂತ್ರವನ್ನು ಸಾಕಾರಗೊಳಿಸಿದ ಆಧುನಿಕ ಭಗಿರಥರಾಗಿದ್ದಾರೆ. ಅಲ್ಲದೆ ಹಲವು ದೇವಾಲಯಗಳನ್ನು ಜೀಣೋರ್ದ್ಧಾರ ಮಾಡಿ ಧಾರ್ಮಿಕ ಕೇಂದ್ರಗಳನ್ನು ಪೋಷಿಸಿದ್ದಾರೆ ಎಂದರು.
ಯುಡಾ ಅಧ್ಯ ಬಾಬುರಾವ ಕಾಡ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಇತರರಿದ್ದರು.