- ಬೆಂಗಳೂರಿನಲ್ಲಿ ಮೇ 7 ರಿಂದ 9 ರವರೆಗೆ 'ಒಡಿಸ್ಸಿ ಆಫ್ ಲವ್' ಪ್ರದರ್ಶನ
- ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ 'ಒಡಿಸ್ಸಿ ಆಫ್ ಲವ್' ಪ್ರದರ್ಶನ
- ಈ ಕಾರ್ಯಕ್ರಮದ ಟಿಕೆಟ್ ಮಾರಾಟದಿಂದ ಕೆಐಎಎಫ್‌ನ 'ನಮ್ಮ ಶಿಕ್ಷಣ' ಯೋಜನೆಗೆ ಬಳಕೆ ಮಾಡಲಾಗುತ್ತದೆ
ಬೆಂಗಳೂರು: ಕಲೆ ಸಮಾಜಮುಖಿ ಕಾರ್ಯಕ್ಕೂ ಬಳಕೆಯಾಗಬೇಕು ಎಂಬ ಆಶಯದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಸಾಮಾಜಿಕ ಹೊಣೆಗಾರಿಕೆ ವಿಭಾಗವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ (ಕೆಐಎಎಫ್) ವತಿಯಿಂದ, ಫೇಸ್ 1 ವರ್ಲ್ಡ್ ಹಾಗೂ ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಸಹಯೋಗದಲ್ಲಿ 'ಒಡಿಸ್ಸಿ ಆಫ್ ಲವ್'(Odyssey of Love Musical) ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ನಾಟಕವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಆಯೋಜಿಸುತ್ತಿದೆ. ಕಣ್ಣು, ಕಿವಿಗೆ ಹಬ್ಬವೆನಿಸುವ ಈ ಸಂಗೀತ ಹಾಗೂ ನೃತ್ಯಮಯ ಪ್ರದರ್ಶನವು ಮೇ 7 ರಿಂದ 9 ರವರೆಗೆ ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಏನಿದು 'ಒಡಿಸ್ಸಿ ಆಫ್ ಲವ್'?
ಮಹಾಕವಿ ಕಾಳಿದಾಸನ ಜಗತ್ಪ್ರಸಿದ್ಧ ಕೃತಿ 'ಶಾಕುಂತಲ'ದ ಕಥಾಹಂದರವನ್ನು ಆಧರಿಸಿರುವ ಈ ನಾಟಕವನ್ನು, ಆಧುನಿಕ 'ಪಾಪ್ ಒಪೆರಾ' ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರೀತಿ, ವಿರಹ, ಸ್ತ್ರೀತ್ವದ ಶಕ್ತಿ ಹಾಗೂ ರೂಪಾಂತರದ ಕಥೆಯನ್ನು ಇದು ಸಾರುತ್ತದೆ.
ಪಾಪ್, ರಾಕ್ ಮತ್ತು ಜಾಝ್ ಸಂಗೀತದ ಅಬ್ಬರಕ್ಕೆ ಭಾರತೀಯ ಶಾಸ್ತ್ರೀಯ ನೃತ್ಯದ ಲಯವನ್ನು ಬೆಸೆಯಲಾಗಿದ್ದು, ಪಾಶ್ಚಿಮಾತ್ಯ ಹಾಗೂ ಪೌರಸ್ತ್ಯ ಸಂಸ್ಕೃತಿಗಳ ಅದ್ಭುತ ಕಲಾ-ಸೇತುವೆಯಾಗಿ ಇದು ಮೂಡಿಬರಲಿದೆ. ಬರೋಬ್ಬರಿ 60 ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನ ಪ್ರೇಕ್ಷಕರನ್ನು ಅಕ್ಷರಶಃ ಬೇರೊಂದು ಮಾಯಾಲೋಕಕ್ಕೆ ಕರೆದೊಯ್ಯಲಿದೆ.
ಶಿಕ್ಷಣಕ್ಕಾಗಿ ಕಲೆ - 'ನಮ್ಮ ಶಿಕ್ಷಣ' ಯೋಜನೆಗೆ ಆರ್ಥಿಕ ನೆರವು
ಈ ಕಾರ್ಯಕ್ರಮದ ಟಿಕೆಟ್ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿಯನ್ನೂ ಕೆಐಎಎಫ್‌ನ 'ನಮ್ಮ ಶಿಕ್ಷಣ' ಯೋಜನೆಗೆ ಬಳಸಲಾಗುತ್ತದೆ. ಈಗಾಗಲೇ ಈ ಯೋಜನೆಯಡಿ 6 ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಡಿಜಿಟಲ್ ಕಲಿಕೆ ಮತ್ತು ಸಮಗ್ರ ಶಿಕ್ಷಣವನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಇದರಿಂದ 2,750 ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಈ ಪ್ರದರ್ಶನದ ನಿಧಿಯ ಮೂಲಕ ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಬರೋಬ್ಬರಿ 30,000 ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
ಈ ಮಹತ್ವದ ಕಾರ್ಯಕ್ರಮದ ಕುರಿತು ಮಾತನಾಡಿದ ಬಿಐಎಎಲ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್, "ಕಲೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬುದು ನಮ್ಮ ನಂಬಿಕೆ. ಸೃಜನಶೀಲತೆ ಮತ್ತು ಸಾಮಾಜಿಕ ಉದ್ದೇಶವನ್ನು ಒಗ್ಗೂಡಿಸಿರುವ ಈ 'ಒಡಿಸ್ಸಿ ಆಫ್ ಲವ್' ಪ್ರದರ್ಶನ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಈ ಮೂಲಕ ರಂಗಭೂಮಿಯ ಆಚೆಗೂ ಶೈಕ್ಷಣಿಕವಾಗಿ ದೊಡ್ಡ ಬದಲಾವಣೆ ತರಲು ನಾವು ಸಜ್ಜಾಗಿದ್ದೇವೆ" ಎಂದರು.
ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಮಾತನಾಡಿ, "ಸಂಗೀತ, ನೃತ್ಯ ಮತ್ತು ಫ್ಯಾಷನ್ ಮೂಲಕ ಕಥೆ ಹೇಳುವ ನನ್ನ ಬಹುದಿನದ ಕನಸು ಈ ಕೃತಿ. ಯಾವುದೇ ನಿರೀಕ್ಷೆಗಳಿಲ್ಲದೆ ಕುತೂಹಲದಿಂದ ಬರುವ ಪ್ರೇಕ್ಷಕರು ಮಂತ್ರಮುಗ್ಧರಾಗಿ ಹೋಗುವುದು ಖಚಿತ. ವಿಶೇಷವಾಗಿ ಈ ನನ್ನ ಸ್ವಂತ ಪ್ರದರ್ಶನವು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು, (ಏಜೆನ್ಸೀಸ್).